ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ಗೆ ಇಂದು ಸಂಜೆ ಅಹಮದಾಬಾದ್‌ನಲ್ಲಿ ಅದ್ಧೂರಿ ಆರಂಭ ದೊರೆಯಲಿದೆ. ಮೊದಲ ದಿನ "ಕ್ಯಾಪ್ಟನ್ ಕೂಲ್" ಎಂದೇ ಖ್ಯಾತರಾಗಿರುವ ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆಕ್ರಮಣಕಾರಿ ಆಟಗಾರ ಹಾರ್ದಿಕ್ ಮುಂದಾಳತ್ವದ ಗುಜರಾತ್ ಟೈಟಾನ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ನಾಲ್ಕು ಬಾರಿ ಚಾಂಪಿಯನ್ ಆಗಿರುವ ಚೆನ್ನೈಯನ್ನು ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದು ಬೀಗಿದ ಟೈಟಾನ್ಸ್ ಹೇಗೆ ಎದುರಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಧೋನಿ ಅಲಭ್ಯ?: 16ನೇ ಆವೃತ್ತಿಯ ಐಪಿಎಲ್ಗೆ ಗಾಯದ ಸಮಸ್ಯೆ ಕಾಡುತ್ತಿದೆ. ಈ ವರ್ಷ ಸ್ಟಾರ್ ಆಟಗಾರರೇ ಇಂಜುರಿಗೆ ಒಳಗಾಗಿ ತಂಡಗಳಿಂದ ಹೊರಗಿದ್ದಾರೆ. ಈ ನಡುವೆ ಮಹೇಂದ್ರ ಸಿಂಗ್ ಧೋನಿ ಕೂಡ ಅಭ್ಯಾಸದ ಸಂದರ್ಭದಲ್ಲಿ ಮೊಣಕಾಲು ಗಾಯಕ್ಕೊಳಗಾಗಿದ್ದು, ಮೊದಲ ಪಂದ್ಯಕ್ಕೆ ಗೈರಾಗುತ್ತಾರೆ ಎಂದು ಕೆಲವೆಡೆ ವರದಿಯಾಗಿದೆ.
ಆದರೆ ಮೊದಲ ಪಂದ್ಯದಲ್ಲಿ ಧೋನಿ ಆಡಲಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಹೇಳಿದ್ದಾರೆ. "ನನಗೆ ತಿಳಿದಿರುವಂತೆ ಧೋನಿ ಶೇ 100 ರಷ್ಟು ಆಡುತ್ತಾರೆ. ಬೇರೆ ಯಾವುದೇ ಬೆಳವಣಿಗೆಯ ಬಗ್ಗೆ ನನಗೆ ಗೊತ್ತಿಲ್ಲ. ಒಂದು ವೇಳೆ ಧೋನಿ ಆಡದಿದ್ದರೆ, ಡೆವೊನ್ ಕಾನ್ವೇ ಅಥವಾ ಅಂಬಟಿ ರಾಯುಡು ವಿಕೆಟ್ ಕೀಪಿಂಗ್ ಮಾಡಬಹುದು. ಟೀಮ್ನಲ್ಲಿ ಮಹಿ ಬಿಟ್ಟರೆ ಇವರಿಬ್ಬರು ಕೀಪಿಂಗ್ ಸಾಮರ್ಥ್ಯ ಹೊಂದಿದ್ದಾರೆ" ಎಂದರು.