ಫ್ಲೋರಿಡಾ(ಅಮೆರಿಕ):ಸಾಂಘಿಕ ಪ್ರದರ್ಶನ ನೀಡಿದ ಭಾರತ ಕ್ರಿಕೆಟ್ ತಂಡ ಇಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 4ನೇ ಟಿ20 ಪಂದ್ಯವನ್ನು 59 ರನ್ಗಳಿಂದ ಜಯಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯನ್ನು 3-1 ರಿಂದ ಕೈವಶ ಮಾಡಿಕೊಂಡಿದೆ. ಇದು ಭಾರತದ 13ನೇ ಸರಣಿ ಜಯ ಅನ್ನೋದು ವಿಶೇಷ.
ಶನಿವಾರ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಮೈದಾನದಲ್ಲಿ ಭಾರತೀಯರ ಬ್ಯಾಟಿಂಗ್, ಬೌಲಿಂಗ್ ಸಾಮರ್ಥ್ಯ ಸಾಬೀತಾಯಿತು. ಮಳೆಯ ಕಾರಣ ತಡವಾಗಿ ಆರಂಭವಾದ ಪಂದ್ಯದಲ್ಲಿ ವಾತಾವರಣದ ಲಾಭ ಪಡೆದು ಗೆಲ್ಲುವ ಗುರಿಯಿಂದ ಮೈದಾನಕ್ಕಿಳಿದ ಕೆರಿಬಿಯನ್ನರ ಎಲ್ಲ ತಂತ್ರಗಳನ್ನೂ ಭಾರತ ಬುಡಮೇಲು ಮಾಡಿತು.
ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ನಾಯಕ ರೋಹಿತ್ ಶರ್ಮಾ ಬಿರುಸಿನ ಬ್ಯಾಟ್ ಬೀಸಿ 33 ರನ್ ಸಂಪಾದಿಸಿದರು. ಸೂರ್ಯಕುಮಾರ್ 24, ದೀಪಕ್ ಹೂಡಾ 21, ರಿಷಬ್ ಪಂತ್ 44, ಸಂಜು ಸ್ಯಾಮ್ಸನ್ 30 ರನ್ ಗಳಿಸಿದರು. ಕೊನೆಯಲ್ಲಿ ಸಿಡಿದ ಅಕ್ಸರ್ ಪಟೇಲ್ 8 ಎಸೆತಗಳಲ್ಲಿ ಸಿಕ್ಸರ್, ಬೌಂಡರಿಗಳ ಸಮೇತ 20 ರನ್ ಕೊಡುಗೆ ನೀಡಿದರು.
ನಿಗದಿತ 20 ಓವರ್ಗಳಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 191 ರನ್ ಪೇರಿಸಿತು. ಸರಣಿಯಲ್ಲಿ ಕಾಡಿದ್ದ ಒಬೆಡ್ ಮೆಕಾಯ್ ಈ ಪಂದ್ಯದಲ್ಲಿ ದುಬಾರಿಯಾದರು. 4 ಓವರ್ಗಳ ಕೋಟಾದಲ್ಲಿ 66 ರನ್ ಚಚ್ಚಿಸಿಕೊಂಡು 2, ಅಲ್ಜಾರಿ ಜೋಸೆಫ್ 2 ವಿಕೆಟ್ ಕಿತ್ತರು.