ಓವಲ್ (ಲಂಡನ್): ಗಿಲ್ ಔಟೋ ಅಥವಾ ನಾಟೌಟೋ... ಇದು ನಿನ್ನೆ ಭಾರತ ಎರಡನೇ ಸೆಷನ್ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಾಗ ಚರ್ಚೆಗೆ ಬಂದ ವಿಷಯ. ಸ್ಕಾಟ್ ಬೋಲ್ಯಾಂಡ್ ಎಸೆತವೊಂದು ಗಿಲ್ ಬ್ಯಾಟ್ ಎಡ್ಜ್ ಮೂಲಕ ಹಿಂದಕ್ಕೆ ಸಾಗಿದ್ದು ಸ್ಲಿಪ್‌ನಲ್ಲಿದ್ದ ಗ್ರೀನ್ ಕ್ಯಾಚ್ ಮಾಡುವ ಅದ್ಭುತ ಪ್ರಯತ್ನ ಮಾಡುತ್ತಾರೆ. ಮೂರನೇ ಅಂಪೈರ್ ಪ್ರಕಾರ, ಈ ಕ್ಯಾಚ್ ಅನ್ನು ಪೂರ್ಣಗೊಳಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಎರಡನೇ ಇನ್ನಿಂಗ್ಸ್ನಲ್ಲಿ 270 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು 443 ರನ್‌ಗಳ ಮುನ್ನಡೆ ಪಡೆದು ಆಸ್ಟ್ರೇಲಿಯಾ ಡಿಕ್ಲೇರ್ ಮಾಡಿಕೊಂಡಿತ್ತು. 444 ರನ್ ಗುರಿ ಬೆನ್ನತ್ತಿರುವ ಭಾರತ ಉತ್ತಮ ಆರಂಭ ಕಾಣುವಾಗ ಗಿಲ್ ಕ್ಯಾಚ್ ನೀಡಿ ಔಟಾದರು. ನಂತರ ಇದು ತೀವ್ರ ಚರ್ಚೆಗೊಳಗಾದ ಸಂಗತಿಯಾಯಿತು. ಗ್ರೀನ್ ಕೈಯಲ್ಲಿ ಬಾಲ್ ಸಂಪೂರ್ಣವಾಗಿ ನಿಂತಿತ್ತೇ ಅಥವಾ ಕೈಗೆ ತಗುಲಿ ನೆಲಕ್ಕೆ ಬಿದ್ದ ಚೆಂಡನ್ನು ಕ್ಯಾಚ್ ಎಂದು ಪರಿಗಣಿಸಲಾಯಿತೇ ಎಂಬುದು ವಿವಾದ. ಸಾಮಾಜಿಕ ಜಾಲತಾಣದಲ್ಲಂತೂ ಎರಡೂ ಬದಿಯ ಫೋಟೋಗಳು ಹರಿದಾಡುತ್ತಿದ್ದು, ಕ್ಯಾಚ್ ಸಂಪೂರ್ಣ ಆಗಿಲ್ಲ, ಮೂರನೇ ಅಂಪೈರ್ ನಿರ್ಧಾರ ತಪ್ಪೆಂದು ಹೇಳಲಾಗುತ್ತಿದೆ.
ಸ್ಕಾಟ್ ಬೋಲ್ಯಾಂಡ್ ಎಸೆತದಲ್ಲಿ ಶುಭಮನ್ ಗಿಲ್ ಅವರ ಎಡ್ಜ್, ಸ್ಲಿಪ್‌ನಲ್ಲಿದ್ದ ಕ್ಯಾಮರಾನ್ ಗ್ರೀನ್‌ಗೆ ಹತ್ತಿರವಾಗಿತ್ತು. ಎತ್ತರದ ಆಲ್‌ರೌಂಡರ್ ಗ್ರೀನ್ ಎಡಕ್ಕೆ ಕೈಚಾಚಿ ಡೈವ್ ಮಾಡಿದರು. ಫೀಲ್ಡ್ ಅಂಪೈರ್ಗಳಿಗೆ ಈ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗಿತ್ತು. ಮೊದಲ ನೋಟದಲ್ಲಿ, ಗ್ರೀನ್ ಒನ್-ಹ್ಯಾಂಡ್ ಕ್ಯಾಚ್ ತೆಗೆದುಕೊಳ್ಳುವ ಮೊದಲು ಚೆಂಡು ನೆಲ ಮುಟ್ಟಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಕೆಲವು ಅನುಮಾನಗಳು ಕಂಡುಬಂದವು. ಇದಕ್ಕಾಗಿ ಮೂರನೇ ಅಂಪೈರ್ ರಿಚರ್ಡ್ ಕೆಟಲ್‌ಬರೋಗೆ ಉಲ್ಲೇಖಿಸಲಾಯಿತು.
ಮುಂದಿನಿಂದ ಪ್ಲೇ ಆದ ವಿಡಿಯೋದಲ್ಲಿ ಗ್ರೀನ್ ಕೈಯಿಂದ ಚೆಂಡು ಕೈ ಜಾರಿದಂತೆ ಕಂಡುಬಂದಿದೆ. ಆದರೆ ಹಿಂಬದಿಯಿಂದ ತೆಗೆದ ಒಂದು ಫೂಟೇಜ್ನಲ್ಲಿ ಬಾಲ್ನ ಅಡಿಯಲ್ಲಿ ಬೆರಳು ಇದ್ದದ್ದು ಕಂಡು ಬರುತ್ತದೆ. ಆದರೆ ಈ ಬಗ್ಗೆ ಟಿವಿ ಅಂಪೈರ್ ವಿಸ್ತೃತವಾಗಿ ನೋಡಿ ಗ್ರೀನ್ ಕ್ಯಾಚ್ ಮಾಡಿದ್ದಾರೆ ಎಂಬ ನಿರ್ಧಾರಕ್ಕೆ ಬಂದು ಔಟೆಂದು ನಿರ್ಧಾರ ಹೊರಹಾಕುತ್ತಾರೆ.