ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೆಸ್ಟ್ ಮತ್ತು ಏಕದಿನ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಇದರಲ್ಲಿ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಅವರಿಗೆ ಸ್ಥಾನ ಸಿಕ್ಕಿಲ್ಲ. ಈಗ ಇದು ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಆಗಿತ್ತು. ಆದರೆ ಇದಕ್ಕೆ ಕೇವಲ ಪೂಜಾರ ಅವರನ್ನು ಮಾತ್ರ ಬಲಿಪಶು ಮಾಡಲಾಗುತ್ತಿದೆಯೇ ಎಂದು ಪ್ರಶ್ನೆಗಳು ಮೂಡುತ್ತಿದೆ. ಇನ್ನೊಂದೆಡೆ ಯುವ ಆಟಗಾರರಿಗೆ ಅವಕಾಶ ಸಿಕ್ಕಿರುವುದರ ಬಗ್ಗೆ ಸಂತಸವೂ ವ್ಯಕ್ತವಾಗುತ್ತಿದೆ.
ಹಾಗೇ ಯುವ ಪ್ರತಿಭೆಗಳನ್ನು ಆಯ್ಕೆ ಮಾಡಿದ ಮಾನದಂಡವ್ನನು ಕೆಲ ಹಿರಿಯ ಆಟಗಾರರು ಪ್ರಶ್ನಿಸಿದ್ದಾರೆ. ಏಕೆಂದರೆ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶ ಸಿಕ್ಕಿಲ್ಲ, ಹೀಗಾಗಿ ಕೇವಲ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಭಾರತ ತಂಡಕ್ಕೆ ಆಯ್ಕೆ ಆಗುತ್ತಾರೆ ಎಂಬಂತಾಗುತ್ತಿದೆ ಎನ್ನಲಾಗಿದೆ.
ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್,"ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತದ ಬ್ಯಾಟಿಂಗ್ ವೈಫಲ್ಯದ ನಂತರ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಅವರನ್ನು ಅನ್ಯಾಯವಾಗಿ ಗುರಿಯಾಗಿಸಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಕೈಬಿಡಲಾಗಿದೆ. ಅವರನ್ನು ಏಕೆ ಕೈಬಿಡಲಾಗಿದೆ? ನಮ್ಮ ಬ್ಯಾಟಿಂಗ್ ವೈಫಲ್ಯಕ್ಕೆ ಅವರನ್ನು ಏಕೆ ಬಲಿಪಶು ಮಾಡಲಾಗಿದೆ. ಅವರು ಭಾರತೀಯ ಕ್ರಿಕೆಟ್‌ನ ನಿಷ್ಠಾವಂತ ಆಟಗಾರ. ಆದರೆ ಅವರಿಗೆ ಲಕ್ಷಾಂತರ ಅನುಯಾಯಿಗಳಿಲ್ಲದ ಕಾರಣ ಕೈಬಿಟ್ಟರೆ, ಅವರ ಪರವಾಗಿ ಯಾರೂ ಗಲಾಟೆ ಮಾಡುವವರು ಇಲ್ಲ ಎಂದು ಅಲ್ಲವೇ"ಎಂದು ಪ್ರಶ್ನಿಸಿದ್ದಾರೆ.
"ವಯಸ್ಸು ಒಂದು ಅಂಕಿ ಅಷ್ಟೇ, ಇಂದು ಜನರು 39 ರಿಂದ 40 ವರ್ಷದ ವರೆಗೂ ಆಡುವ ಸಾಧ್ಯತೆ ಇದೆ. ಪೂಜಾರ ಹಳ್ಳಿಗಾಡಿನಲ್ಲಿ ಕ್ರಿಕೆಟ್ ಆಡಿದ ಅನುಭವವನ್ನು ಹೊಂದಿದ್ದಾರೆ. ಹಾಗಾಗಿ ಅವರು ಸಾಕಷ್ಟು ರೆಡ್-ಕಾಲ್ ಕ್ರಿಕೆಟ್ ಆಡಿದ್ದಾರೆ ಮತ್ತು ಅದರ ಬಗ್ಗೆ ಅವರಿಗೆ ತಿಳಿದಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವೈಫಲ್ಯ ನೋಡುವುದಾದರೆ, ಅಜಿಂಕ್ಯಾ ರಹಾನೆ ಒಬ್ಬರನ್ನು ಬಿಟ್ಟು ಮತ್ತಾರು ಬ್ಯಾಟಿಂಗ್ನಲ್ಲಿ ಯಶಸ್ಸು ಕಂಡಿಲ್ಲ. ಆದರೆ ಆ ಸೋಲಿಗೆ ಪೂಜಾರ ಅವರನ್ನು ಮಾತ್ರ ಏಕೆ ಬಲಿಪಶು ಮಾಡುತ್ತಿದ್ದೀರಿ" ಎಂದು ಕೇಳಿದ್ದಾರೆ.
"ಇತ್ತೀಚೆಗೆ ಬಿಸಿಸಿಐನ ಆಯ್ಕೆ ಸಮಿತಿ ಮಾಧ್ಯಮಗಳ ಮುಂದೆ ಬರುತ್ತಿಲ್ಲ. ಅಲ್ಲದೇ ಸಂವಾದವನ್ನು ನಡೆಸುತ್ತಿಲ್ಲ. ಆದರೆ ಪೂಜಾರ ಅವರನ್ನು ಕೈಬಿಡಲು ಕಾರಣ ಏನು ಎಂದು ಆಯ್ಕೆಗಾರರು ತಿಳಿಸುವ ಅಗತ್ಯ ಇದೆ. ಅಲ್ಲದೇ ತಂಡದ ಆಯ್ಕೆಗೆ ಮತ್ತು ಕೈ ಬಿಡಲು ಸಮಿತಿ ತೆಗೆದುಕೊಳ್ಳುವ ಮಾನದಂಡಗಳೇನು ಎಂಬುದನ್ನೂ ತಿಳಿಸಬೇಕು" ಎಂದಿದ್ದಾರೆ.
ಯುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲಾಗುತ್ತಿರುವುದಕ್ಕೆ ಅನುಸರಿಸುತ್ತಿರುವ ಅಂಕಿ- ಅಂಶ ಯಾವುದು ಎಂದು ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ."ಸರ್ಫರಾಜ್ ಖಾನ್ ಕಳೆದ 3 ಸೀಸನ್‌ಗಳಲ್ಲಿ 100 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿದ್ದಾರೆ, ಅವರು ಆಯ್ಕೆಯಾಗಲು ಇನ್ನೇನು ಮಾಡಬೇಕು? ಅವರ ಸ್ಥಾನ 11 ರಲ್ಲಿ ಇಲ್ಲದಿದ್ದರೂ ಅವರನ್ನು ತಂಡಕ್ಕೆ ತೆಗೆದುಕೊಳ್ಳಬಹುದು. ಖಾನ್ ಪ್ರದರ್ಶನವನ್ನು ವೀಕ್ಷಿಸಲಾಗುತ್ತಿದೆ ಎಂದು ಹೇಳಿ ಇಲ್ಲದಿದ್ದರೆ, ರಣಜಿ ಆಡಿಸುವುದನ್ನೇ ನಿಲ್ಲಿಸಿ. ಏಕೆಂದರೆ ಅದರಲ್ಲಿ ಆಡುವುದಕ್ಕೆ ಯಾವುದೇ ಅರ್ಥವಿಲ್ಲ" ಎಂದಿದ್ದಾರೆ..
ಇದನ್ನೂ ಓದಿ:ವೆಸ್ಟ್ ಇಂಡೀಸ್ ಪ್ರವಾಸ: ಏಕದಿನ, ಟೆಸ್ಟ್‌ಗೆ ಟೀಂ ಇಂಡಿಯಾ ಪ್ರಕಟ- ಜೈಸ್ವಾಲ್, ರುತುರಾಜ್ ಇನ್, ಪೂಜಾರಾ ಔಟ್