ನವದೆಹಲಿ: ಸಂಗೀತ ಲೋಕದ ದಂತಕತೆ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಕ್ರಿಕೆಟ್ ಪ್ರೇಮಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಆ ಕ್ರಿಕೆಟ್ ಪ್ರೇಮ ಎಷ್ಟಿತ್ತೆಂದರೆ, 2011ರ ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಭಾರತ ಗೆಲ್ಲಲೆಂದು ಉಪವಾಸ ಕೂಡ ಮಾಡಿದ್ದರಂತೆ.
ದೇಶದ ಅತ್ಯಂತ ಪ್ರಸಿದ್ಧ ಗಾಯಕಿ ಆಗಿದ್ದ ಲತಾ ಮಂಗೇಶ್ಕರ್ ತಮ್ಮ 92ನೇ ವಯಸ್ಸಿನಲ್ಲಿ ಭಾನುವಾರ ಬೆಳಗ್ಗೆ ಬಹು ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಮಧುರ ಕಂಠದಿಂದ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಮಂಗೇಶ್ಕರ್, ಕ್ರಿಕೆಟ್ ಆಟವೆಂದರೆ ಅನ್ನ, ನೀರು ಬಿಟ್ಟು ನೋಡುವಷ್ಟು ಹುಚ್ಚು ಪ್ರೇಮ ಅವರಲ್ಲಿತ್ತು. ಇದಕ್ಕೆ ಒಂದೆರಡು ನಿದರ್ಶನಗಳಿಲ್ಲಿವೆ.
1983ರ ವಿಶ್ವಕಪ್ ಫೈನಲ್ ಪಂದ್ಯವನ್ನು ಲಾರ್ಡ್ಸ್ ಮೈದಾನದಲ್ಲಿ ಕುಳಿತು ವೀಕ್ಷಿಸಿದ್ದ ಲತಾ ಅವರು, 2011ರಲ್ಲಿ ಭಾರತ 28 ವರ್ಷಗಳ ಬಳಿಕ ಗೆದ್ದ 2ನೇ ವಿಶ್ವಕಪ್ ಪಂದ್ಯವನ್ನು ಮನೆಯಲ್ಲಿ ಕುಳಿತು ವೀಕ್ಷಿಸಿದ್ದರು.
ಪಾಕಿಸ್ತಾನ ವಿರುದ್ಧ ಗೆಲುವಿಗಾಗಿ ಉಪವಾಸವಿದ್ದು ಪ್ರಾರ್ಥನೆ
ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನದ ವಿರುದ್ಧದ ಸೆಮಿಫೈನಲ್ ಪಂದ್ಯದ ವೇಳೆ ಅವರು ಭಾರತ ಗೆಲ್ಲಲಿ ಎಂದು ತೊಟ್ಟು ನೀರನ್ನು ಕುಡಿಯದೇ ಉಪವಾಸ ಇದ್ದು ಪ್ರಾರ್ಥಿಸಿದ್ದರಂತೆ. ಈ ವಿಷಯವನ್ನು ಸ್ವತಃ ಗಾನ ಕೋಗಿಲೇ ಪಿಟಿಐ ಸಂದರ್ಶನದ ವೇಳೆ ಬಹಿರಂಗ ಪಡಿಸಿದ್ದರು.
"ನಾನು ಇಡೀ ಪಂದ್ಯವನ್ನು ವೀಕ್ಷಿಸಿದ್ದೆ ಮತ್ತು ತುಂಬಾ ಚಿಂತೆಗೀಡಾಗಿದ್ದೆ. ಭಾರತ ಆಡುವಾಗ ನನ್ನ ಕುಟುಂಬದ ಪ್ರತಿಯೊಬ್ಬರೂ ಕೆಲವು ರೀತಿಯ ಮೂಢನಂಬಿಕೆಗಳನ್ನು ಅನುಸರಿಸುತ್ತಾರೆ. ನಾನು, ಮೀನಾ ಮತ್ತು ಉಷಾ ಆ ಪಂದ್ಯದ ವೇಳೆ ಒಂದು ತೊಟ್ಟು ನೀರನ್ನು ಸಹಾ ಕುಡಿದಿರಲಿಲ್ಲ. ನಾನಂತೂ ಪ್ರತಿಕ್ಷಣವೂ ಭಾರತ ಗೆಲ್ಲಬೇಕೆಂದು ಪ್ರಾರ್ಥಿಸುತ್ತಿದ್ದೆ ಮತ್ತು ಭಾರತ ಗೆದ್ದ ನಂತರ ನಾವೆಲ್ಲಾ ಅಂದು ರಾತ್ರಿ ಊಟ ಮಾಡಿದ್ದೆವು" ಎಂದು ಅವರು ತಿಳಿಸಿದ್ದರು.