ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಭಾರತದಲ್ಲಿ ಕ್ರಿಕೆಟ್ಗೆ ವಿಶೇಷ ಮಾನ್ಯತೆ ಮತ್ತು ಅಭಿಮಾನಿಗಳ ಬಳಗ ಇದೆ. ಆದರೆ, ಇದು ಎಲ್ಲಾ ಕ್ರಿಕೆಟ್ಗೂ ದೊರೆಯುತ್ತಿಲ್ಲ ಎಂಬುದು ಸಹ ನಾವು ತಿಳಿದುಕೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಕ್ರಿಕೆಟ್ಗೂ ಮಾನ್ಯತೆ ದೊರೆಯುತ್ತಿದೆ. ಅಲ್ಲದೇ ಐಪಿಎಲ್ ರೀತಿ ಟಿ20 ಲೀಗ್ಗಳೂ ಬೇರೆ, ಬೇರೆ ದೇಶಗಳಲ್ಲಿ ಆಯೋಜನೆ ಮಾಡಲಾಗುತ್ತಿದೆ. ಅದೇ ರೀತಿ, ಅಂಧರ ಕ್ರಿಕೆಟ್ಗೂ ಇತ್ತೀಚೆಗೆ ಅವಕಾಶಗಳು ಸೃಷ್ಟಿಯಾಗುತ್ತಿದೆ. ಆದರೆ, ವಿಶೇಷ ಚೇತನರು ಸಹ ಕ್ರಿಕೆಟ್ನಲ್ಲಿ ಆಸಕ್ತಿ ಹೊಂದಿದ್ದು, ಅವರೂ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಭಾರತೀಯ ಕ್ರಿಕೆಟ್ ವಲಯಗಳಲ್ಲಿ, ಗಾಲಿಕುರ್ಚಿ ಕ್ರಿಕೆಟ್ ಕೂಡ ಪ್ರಸ್ತುತ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ರೂಪಿಸಲು ಪ್ರಯತ್ನಿಸುತ್ತಿದೆ. ವೀಲ್‌ಚೇರ್ ಕ್ರಿಕೆಟ್ ಸಾಮಾನ್ಯ ಕ್ರಿಕೆಟ್‌ನಂತೆಯೇ ಅದೇ ನಿಯಮಗಳನ್ನು ಅನುಸರಿಸುತ್ತದೆ ಆದರೂ, ಆಟಗಾರರು ಗಾಲಿಕುರ್ಚಿಗಳಿಗೆ ಸೀಮಿತರಾಗಿದ್ದಾರೆ ಮತ್ತು ಮೈದಾನವು 45 ರಿಂದ 55 ಮೀಟರ್ ಉದ್ದವಿರುತ್ತದೆ. ವ್ಹೀಲ್ ಚೇರ್ ಕ್ರಿಕೆಟ್ ಅಸೋಸಿಯೇಷನ್ ಜಮ್ಮು ಮತ್ತು ಕಾಶ್ಮೀರವು ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ವಾರ್ಷಿಕವಾಗಿ ಸುಮಾರು 15 ವೀಲ್‌ಚೇರ್ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುತ್ತಿದೆ.
ಕಣಿವೆ ರಾಜ್ಯದಲ್ಲಿ ವ್ಹೀಲ್ ಚೇರ್ನಲ್ಲಿ ಕ್ರಿಕೆಟ್ ಆಡುವ ಆಸಕ್ತರ ಗುಂಪು ತಂಡ ಕಟ್ಟಿಕೊಂಡು ತಮ್ಮ ಉತ್ಸಾಹವನ್ನು ತೋರುತ್ತಿದ್ದಾರೆ. ನ್ಯೂನತೆಯಿಂದ ಇಂದ ನಮ್ಮಿಂದೇನೂ ಆಗದು ಎಂದು ಖಿನ್ನತೆಗೆ ಒಳಗಾಗಿರುವವರನ್ನು ಆಟೋಟದಲ್ಲಿ ಭಾಗವಹಿಸುವಂತೆ ಮಾಡಿ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಇಲ್ಲಿನ ಗಂದರ್‌ಬಾಲ್‌ನ ಆರಂಭಿಕ ಬ್ಯಾಟರ್ ಆದಿಲ್ ಶೇಖ್ ಈಟಿವಿ ಭಾರತದೊಂದಿಗೆ ಮಾತನಾಡಿದ್ದು,"ನಾವು ಎರಡು ಬಾರಿ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇವೆ. ನಾವು ಒಮ್ಮೆ ದೆಹಲಿಗೆ ಪ್ರಯಾಣಿಸಿ ಟ್ರೋಫಿಯನ್ನು ಗೆದ್ದಿದ್ದೇವೆ. ನಾವು 2021 ರಲ್ಲಿ ನಾವು ಗುಜರಾತ್‌ಗೆ ಪ್ರಯಾಣಿಸಿ ಇತರ ಎಂಟು ತಂಡಗಳನ್ನು ಮಣಿಸಿದಿದ್ದೆವು" ಎಂದಿದ್ದಾರೆ.