ಕ್ಯಾಂಡಿ (ಶ್ರೀಲಂಕಾ): ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಪತ್ರಿಕಾಗೋಷ್ಠಿ ನಡೆಸಿ ತಂಡದ 15 ಆಟಗಾರರನ್ನು ಘೋಷಿಸಿದರು. ಇದರಲ್ಲಿ 7 ಜನ ವಿಶ್ವಕಪ್ಗೆ ಮೊದಲಿಗರಾಗಿದ್ದಾರೆ.
ಏಷ್ಯಾಕಪ್ಗೆ ಆಯ್ಕೆ ಮಾಡಿರುವ ತಂಡದಲ್ಲೇ ಮೂವರನ್ನು ಕೈಬಿಡಲಾಗುವುದು ಎಂದು ಈ ಹಿಂದೆಯೇ ಹೇಳಲಾಗಿತ್ತು ಅದರಂತೆ ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ ಮತ್ತು ಮಧ್ಯಮ ಕ್ರಮಾಂಕಕ್ಕೆ ಅಚ್ಚರಿಯ ಆಯ್ಕೆ ಆಗಿದ್ದ ತಿಲಕ್ ವರ್ಮಾ ಅವರನ್ನು ಕೈಬಿಡಲಾಗಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದ ಕೆಎಲ್ ರಾಹುಲ್ ಅವರನ್ನು ಪ್ರಥಮ ಆದ್ಯತೆಯ ವಿಕೆಟ್ ಕೀಪರ್ ಆಗಿ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಏಳು ಜನ ಹೊಸಬರು: 2019ರ ವಿಶ್ವಕಪ್ ತಂಡ ಮತ್ತು ಈ ತಂಡದಲ್ಲಿ 7 ಜನ ಬದಲಾಗಿದ್ದಾರೆ. ನಾಲ್ವರು ಮಾತ್ರ ಹಿಂದಿನ ವಿಶ್ವಕಪ್ನಲ್ಲಿ ಆಡಿದ ಆಟಗಾರು. 2019ರ ವಿಶ್ವಕಪ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನಡೆದಿತ್ತು. ಆ ತಂಡದಲ್ಲಿ ವಿಜಯ ಶಂಕರ್ ಅಚ್ಚರಿಯ ಆಯ್ಕೆ ಆಗಿದ್ದರು.ಅಲ್ಲದೇ ಪಂತ್ ಅವರನ್ನು ಕೈಬಿಟ್ಟಿದ್ದು ಸಹ ಅಚ್ಚರಿಯ ನಡೆ ಎಂಬಂತಿತ್ತು. ಅಂದು ಪಂತ್ ಅವರನ್ನು ಕೈಬಿಟ್ಟು ದಿನೇಶ್ ಕಾರ್ತಿಕ್ಗೆ ಮಣೆ ಹಾಕಲಾಗಿತ್ತು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾಧವ್ ಅವಕಾಶ ಪಡೆದುಕೊಂಡಿದ್ದರು. ಮಧ್ಯಮ ಕ್ರಮಾಂಕದ ಚರ್ಚೆಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ಮನೀಶ್ ಪಾಂಡೆ ಇದ್ದರು ಆದರೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
2019 ವಿಶ್ವಕಪ್ ತಂಡ : ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ವಿಜಯ್ ಶಂಕರ್, ಎಂಎಸ್ ಧೋನಿ (ವಿಕೆಟ್ ಕೀಪರ್), ಕೇದಾರ್ ಜಾಧವ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ.