ಜೋಹಾನ್ಸ್‌ಬರ್ಗ್ :ಇಲ್ಲಿ ನಡೆದ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮಹಿಳೆಯರ ಎರಡನೇ ಏಕದಿನ ಪಂದ್ಯ ದಾಖಲೆಯ ಪಟ್ಟಿಗೆ ಸೇರಿದೆ. ಸೂಪರ್ ಓವರ್ ಎದುರಿಸಿದ ವೆಸ್ಟ್ ಇಂಡೀಸ್ ತಂಡದ ವನಿತೆಯರು ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ದಾಖಲೆ ಬರೆದರು. ತಾವು ಸಿಡಿಸಿದ ಸಿಕ್ಸ್ ಹಾಗೂ ಆಟದ ರೋಮಾಂಚಕರ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿದ್ದಾಜಿದ್ದಿ ಕಾಳಗದ ಬಳಿಕ ಪಂದ್ಯ ಟೈ ಆಗಿತ್ತು. ಹಾಗಾಗಿ, ಉಭಯ ತಂಡಗಳಿಗೆ ಸೂಪರ್ ಓವರ್ ಅವಕಾಶ ನೀಡಲಾಗಿತ್ತು. ವಿಂಡೀಸ್ ಮಹಿಳಾ ಕ್ರಿಕೆಟಿಗರು 25 ರನ್ ಗಳಿಸಿ ಆಫ್ರಿಕಾ ತಂಡವನ್ನು ಮಣಿಸಿದ್ದಾರೆ.
ವಿಂಡೀಸ್ ಪರ ಡಿಯಾಂಡ್ರಾ ಡಾಟಿನ್ 5 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 19 ರನ್ ಗಳಿಸಿದರೆ, ಹೇಲಿ ಮ್ಯಾಥ್ಯೂಸ್ 1 ಎಸೆತದಲ್ಲಿ ಸಿಕ್ಸರ್ ಬಾರಿಸಿ ಗೆಲುವಿನ ದಡ ಮುಟ್ಟಿಸಿದ್ದಾರೆ.
ಇವರಿಬ್ಬರು ಆರು ಎಸೆತಗಳಲ್ಲಿ ಬರೋಬ್ಬರಿ 25 ರನ್ ಗಳಿಸಿ ದಕ್ಷಿಣ ಆಫ್ರಿಕಾದ ಬೌಲರ್ ಶಬ್ನಿಮ್ ಇಸ್ಮಾಯಿಲ್ ಅವರ ಬೆವರಿಳಿಸಿದರು. ಪ್ರತ್ಯುತ್ತರವಾಗಿ ದಕ್ಷಿಣ ಆಫ್ರಿಕಾ ತಂಡದ ಬ್ಯಾಟ್ಸ್‌ಮನ್‌ಗಳಾದ ತಜ್ಮಿನ್ ಬ್ರಿಟ್ಸ್ ಮತ್ತು ಕ್ಲೋಯ್ ಟ್ರಯಾನ್ ಅವರ ಅತ್ಯುತ್ತಮ ಪ್ರದರ್ಶನದ ಬಳಕವೂ 8 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸೂಪರ್ ಓವರ್ಗೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 40.4 ಓವರ್‌ಗಳಲ್ಲಿ 160 ರನ್‌ಗಳಿಗೆ ತನ್ನ ಎಲ್ಲ ವಿಕೆಟ್ ಒಪ್ಪಿಸಿತು. ಬಳಿಕ ಕ್ರೀಸ್ಗೆ ಇಳಿದ ವಿಂಡೀಸ್ 37.4 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯ ಟೈ ಆಗಿದ್ದರಿಂದ ಸೂಪರ್ ಓವರ್ ನೀಡಲಾಗಿತ್ತು. ಈ ಸೂಪರ್ ಓವರ್‌ನಲ್ಲಿ ವಿಂಡೀಸ್ ಮಹಿಳಾ ಕ್ರಿಕೆಟಿಗರ ಆರ್ಭಟದ ಮುಂದೆ ಆಫ್ರಿಕಾ ಸೋತಿದೆ.