ಫ್ಲೋರಿಡಾ (ಅಮೆರಿಕಾ): ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ದಾಖಲೆ ಆರಂಭಿಕ ಜೊತೆಯಾಟದಿಂದ ನಾಲ್ಕನೇ ಪಂದ್ಯವನ್ನು ಗೆದ್ದು ಸರಣಿ ಸಮಬಲ ಮಾಡಿಕೊಂಡಿದೆ. ಇಂದು ಫೈನಲ್ ಹಣಾಹಣಿ ನಡೆಯಲಿದ್ದು, ಗೆದ್ದವರಿಗೆ ಸಿರೀಸ್ ಒಲಿಯಲಿದೆ. ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಗೆದ್ದಿರುವ ಟೀಮ್ ಇಂಡಿಯಾ ಮೂರನೇ ಸರಣಿಯನ್ನು ಗೆಲ್ಲುವ ತವಕದಲ್ಲಿದೆ. ಅಲ್ಲದೇ ಐಪಿಎಲ್ನ ಸ್ಟಾರ್ ಬ್ಯಾಟರ್ಗಳು ಲಯಕ್ಕೆ ಮರಳಿರುವುದು ತಂಡಕ್ಕೆ ಇನ್ನಷ್ಟೂ ಬಲ ಬಂದಂತಾಗಿದೆ.
ಮೊದಲೆರಡು ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ವೈಫಲ್ಯವನ್ನು ಕಂಡಿದ್ದ ಭಾರತ 3 ಮತ್ತು ನಾಲ್ಕನೇ ಪಂದ್ಯದಲ್ಲಿ ಉತ್ತಮ ಕಮ್ಬ್ಯಾಕ್ ಮಾಡಿತು. ನಿನ್ನೆ ರಾತ್ರಿ ನಡೆದ ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ನಲ್ಲಿಯೇ 5ನೇ ಪಂದ್ಯ ಕೂಡ ನಡೆಯಲಿದ್ದು, ಕುತೂಹಲ ಹೆಚ್ಚಿಸಿದೆ. ಮೊದಲು ಬ್ಯಾಟಿಂಗ್ ಮಾಡಿದವರಿಗೆ ಉತ್ತಮ ಪಿಚ್ ಎಂದು ಹೇಳಲಾಗುತ್ತಿದ್ದ ಮೈದಾನದಲ್ಲಿ ಚೇಸಿಂಗ್ ಮಾಡಿ ಭಾರತ ಗೆಲುವು ದಾಖಲಿಸಿದೆ.
ಭಾರತ ತಂಡ ಮೊದಲ ಮೂರು ಪಂದ್ಯದಲ್ಲಿ ಆರಂಭಿಕ ಜೊತೆಯಾಟದ ಕೊರತೆಯನ್ನು ಎದುರಿಸಿತ್ತು. ನಾಲ್ಕನೇ ಪಂದ್ಯದಲ್ಲಿ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ 165 ರನ್ ಬೃಹತ್ ದಾಖಲೆಯ ಜೊತೆಯಾಟ ಮಾಡಿದ್ದಾರೆ. ಹೀಗಾಗಿ ಆರಂಭಿಕರು ಫಾರ್ಮ್ಗೆ ಮರಳಿದ್ದು, ಭಾರತ ಬ್ಯಾಟಿಂಗ್ಗೆ ಬಲ ಬಂದಂತಾಗಿದೆ. ಮೊದಲ ಮೂರು ಪಂದ್ಯಗಳಲ್ಲಿ ಈ ಸರಣಿಯಲ್ಲಿ ಪಾದಾರ್ಪಣೆ ಮಾಡಿದ ತಿಲಕ್ ವರ್ಮಾ ಉತ್ತಮ ಪ್ರದರ್ಶನ ನೀಡಿದ್ದರು. ನಿನ್ನೆ 14 ರನ್ ಇದ್ದಾಗ ಅವರು ಕ್ರಿಸ್ಗೆ ಬಂದು 7 ರನ್ ದಾಖಲಿಸಿದ್ದಾರೆ. ಮೂರನೇ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಆಡಿದ್ದರು. ಈಗಾಗಿ ಐದು ಬ್ಯಾಟರ್ಗಳ ಬಲ ಟೀಮ್ ಇಂಡಿಯಾಕ್ಕೆ ಇದೆ. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಎಲ್ಲರೂ ಅಬ್ಬರಿಸಿದಲ್ಲಿ ಫ್ಲೋರಿಡಾದ ಪಿಚ್ನಲ್ಲಿ 200ರ ಗಡಿ ಮುಟ್ಟುವುದು ಕಷ್ಟವಲ್ಲ.
ಫ್ಲೋರಿಡಾ ಪಿಚ್ ಬ್ಯಾಟರ್ಗೆ ಸಹಕಾರಿಯಾಗಿತ್ತು, ಬೌಲಿಂಗ್ನಲ್ಲಿ ನಿಯಂತ್ರಣ ಸಾಧಿಸಲು ನಾಲ್ಕನೇ ಪಂದ್ಯದಲ್ಲಿ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. ಅದರಲ್ಲೂ ಡೆತ್ ಓವರ್ ಮಾತ್ರ ಮಾಡಿದ ಮುಖೇಶ್ ನಿಯಂತ್ರಣ ಸಾಧಿಸಿದ್ದರು. ಚಹಾಲ್ ಮತ್ತು ಅಕ್ಷರ್ ಒಂದೊಂದು ವಿಕೆಟ್ ಪಡೆದರೂ 35 ಪ್ಲಸ್ ರನ್ ಬಿಟ್ಟುಕೊಟ್ಟು ದುಬಾರಿ ಆದರು. ಹಾಗೇ ಅರ್ಷದೀಪ್ ಸಿಂಗ್ ಸಹ 3 ವಿಕೆಟ್ ಪಡೆದು 38 ರನ್ ಕೊಟ್ಟಿದ್ದಾರೆ. ಈ ಮೂವರು ರನ್ನಲ್ಲಿ ಕಡಿವಾಣ ಹಾಕಿದಲ್ಲಿ ಎದುರಾಳಿ ಪಡೆ 150 ಮೀರಿ ರನ್ ಕಲೆ ಹಾಕುವುದು ಕಷ್ಟವಾಗಲಿದೆ.