ಲಾಡರ್‌ಹಿಲ್ (ಫ್ಲೋರಿಡಾ): ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಸಿರೀಸ್ ಅನ್ನು ಜೀವಂತವಾಗಿ ಉಳಿಸಿಕೊಂಡಿದೆ. ಹೀಗಾಗಿ ನಾಲ್ಕು ಮತ್ತು ಐದನೇ ಟಿ20 ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಆದರೆ ಭಾರತ ಮುಂದಿನ ಎರಡು ಪಂದ್ಯಗಳನ್ನೂ ಗೆಲ್ಲಬೇಕಾದಲ್ಲಿ ತಂಡದಲ್ಲಿ ಬಹಳಷ್ಟು ಸುಧಾರಣೆ ಮಾಡಿಕೊಳ್ಳಬೇಕಿದೆ.
ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ವೆಸ್ಟ್ ಇಂಡೀಸ್ 2-1 ರಿಂದ ಮುನ್ನಡೆಯಲ್ಲಿದೆ. ಮುಂದಿನ ಎರಡೂ ಪಂದ್ಯಗಳು ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ಸ್ಟೇಡಿಯಂನಲ್ಲಿ ನಡೆಯಲಿವೆ. ಭಾರತ ಸರಣಿ ವಶಪಡಿಸಿಕೊಳ್ಳಲು ಎರಡೂ ಪಂದ್ಯವನ್ನು ಗೆಲ್ಲಲೇಬೇಕು. ವಿಂಡೀಸ್ ಒಂದು ಗೆಲುವಿಗಾಗಿ ಎದುರು ನೋಡುತ್ತಿದೆ.
ಆರಂಭಿಕರ ವೈಫಲ್ಯ: ಮೂರನೇ ಪಂದ್ಯಕ್ಕೆ ಇಶಾನ್ ಕಿಶನ್ ಅವರನ್ನು ಕೂರಿಸಿ ಯಶಸ್ವಿ ಜೈಸ್ವಾಲ್ಗೆ ಅವಕಾಶ ಮಾಡಿಕೊಡಲಾಯಿತು. ಆದರೆ ಜೈಸ್ವಾಲ್ ಯಶಸ್ವಿ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಅತ್ತ ಯುವ ಬ್ಯಾಟರ್ ಶುಭಮನ್ ಗಿಲ್ ಸಹ ಮೂರು ಟಿ20ಯಲ್ಲಿ ವಿಫಲರಾಗಿದ್ದಾರೆ. ಮೂರು ಪಂದ್ಯದಲ್ಲಿ ಆರಂಭಿಕ ಜೊತೆಯಾಟವೇ ಮೂಡಿಬಂದಿಲ್ಲ. ಐಪಿಎಲ್ನಲ್ಲಿ ಮಿಂಚಿದ್ದ ಮೂವರು ಆಟಗಾರರೂ ಸಹ ಉತ್ತಮ ಓಪನಿಂಗ್ ನೀಡುವಲ್ಲಿ ವಿಫಲರಾಗಿದ್ದಾರೆ. ನಾಲ್ಕನೇ ಪಂದ್ಯಕ್ಕೆ ಗಿಲ್ಗೆ ಕೊಕ್ ಕೊಟ್ಟು ಮತ್ತು ಇಶಾನ್ ಸ್ಥಾನ ಪಡೆಯುತ್ತಾರಾ ಅಥವಾ ಪ್ರಿನ್ಸ್ಗೆ ಇನ್ನೊಂದು ಅವಕಾಶ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಸೂರ್ಯ, ತಿಲಕ್ ಭರವಸೆ: ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಪಾದಾರ್ಪಣೆ ಮಾಡಿದ ತಿಲಕ್ ವರ್ಮಾ ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೂರು ಪಂದ್ಯದಲ್ಲಿ ಕ್ರಮವಾಗಿ 39,51, ಮತ್ತು 49 ರನ್ ಗಳಿಸಿ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಿದ್ದಾರೆ. ಮೂರನೇ ಪಂದ್ಯದಲ್ಲಿ ಬಿರುಸಿನ ಆಟವಾಡಿ ಫಾರ್ಮ್ಗೆ ಮರಳಿರುವ ಟಿ20 ನಂ.01 ಬ್ಯಾಟರ್ ಸೂರ್ಯ ಕುಮಾರ್ ಯಾದವ್ ನಾಲ್ಕನೇ ಪಂದ್ಯಕ್ಕೂ ಭರವಸೆ ಆಗಿದ್ದಾರೆ. ಮೂರನೇ ಪಂದ್ಯದಲ್ಲಿ ಸೂರ್ಯ 188 ರ ಸ್ಟ್ರೈಕ್ರೇಟ್ನಲ್ಲಿ 83 ರನ್ ಗಳಿಸಿದ್ದರು. ಇದರಿಂದ ಭಾರತ ಎರಡು ಓವರ್ ಉಳಿಸಿಕೊಂಡು ಪಂದ್ಯ ಗೆದ್ದಿತ್ತು. ಇವರ ಜೊತೆ ಹಾರ್ದಿಕ್ ಪಾಂಡ್ಯ ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಮಧ್ಯಮ ಕ್ರಮಾಂಕ ಬಲವಾಗಿ ಕಂಡು ಬರುತ್ತಿದೆ.
ವೇಗಿಗಳ ವಿಚಾರ :ವಿಂಡೀಸ್ ಬ್ಯಾಟರ್ಗಳು ವೇಗದ ಬೌಲರ್ಗಳನ್ನು ಸುಲಭವಾಗಿ ದಂಡಿಸುತ್ತಿದ್ದಾರೆ. ಕಳೆದ ಮೂರು ಪಂದ್ಯದಲ್ಲೂ ವೇಗಿಗಳು ದುಬಾರಿಯಾಗಿದ್ದರು. ಮೂರನೇ ಪಂದ್ಯದಲ್ಲಿ ಕೊನೆಯ ಎರಡು ಓವರ್ನಲ್ಲಿ ವೇಗಿಗಳು ರನ್ ಬಿಟ್ಟುಕೊಟ್ಟಿದ್ದರಿಂದ 160ರ ಗುರಿಯನ್ನು ಭಾರತ ಪಡೆದುಕೊಂಡಿತು. ಇಲ್ಲವಾದಲ್ಲಿ 140ರ ಆಸುಪಾಸಿನಲ್ಲಿ ವಿಂಡೀಸ್ ಅನ್ನು ನಿಯಂತ್ರಿಸಬಹುದಿತ್ತು. ಡೆತ್ ಓವರ್ ಕಂಟ್ರೋಲ್ ಪ್ರತಿ ಪಂದ್ಯದಲ್ಲೂ ತಪ್ಪುತ್ತಿದ್ದು ಇದನ್ನು ತಿದ್ದಿಕೊಳ್ಳಬೇಕಿದೆ.