ಜಾರ್ಜ್‌ಟೌನ್ (ಗಯಾನಾ): ಟಿ20 ಟಾಪ್ ರ್‍ಯಾಂಕಿಂಗ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ 100 ಸಿಕ್ಸ್ ಪೂರೈಸಿದ ದಾಖಲೆಯನ್ನು ಮಾಡಿದ್ದಾರೆ. ಕಳೆದ ಕೆಲ ಪಂದ್ಯಗಳಲ್ಲಿ ಮಂಕಾಗಿದ್ದ ಅವರ ಬ್ಯಾಟ್ ನಿನ್ನೆಯ ಮ್ಯಾಚ್ನಲ್ಲಿ ಘರ್ಜಿಸಿತ್ತು. ವಿಂಡೀಸ್ ನೀಡಿದ್ದ 160 ರನ್ ಗುರಿಯನ್ನು ಚೇಸ್ ಮಾಡುವಾಗ ಸ್ಕೈ 44 ಎಸೆತದಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್ನಿಂದ 83 ರನ್ ಗಳಿಸಿದರು.
ಕಡಿಮೆ ಇನ್ನಿಂಗ್ಸ್ನಲ್ಲಿ 100 ಸಿಕ್ಸ್ ದಾಖಲಿಸಿದ ಭಾರತೀಯ ಆಟಗಾರ ಎಂಬ ಮೈಲಿಗಲ್ಲನ್ನು ಸೂರ್ಯ ಮಾಡಿದ್ದಾರೆ. ಕೇವಲ 49 ಇನ್ನಿಂಗ್ಸ್ನಲ್ಲಿ ಅವರು 100 ಸಿಕ್ಸ್ಗಳನ್ನು ದಾಖಲಿಸಿದ್ದಾರೆ. ಎವಿನ್ ಲೂಯಿಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಡಿಮೆ ಪಂದ್ಯದಲ್ಲಿ ಹೆಚ್ಚು ಸಿಕ್ಸ್ಗಳನ್ನು ದಾಖಲಿಸಿದ ಆಟಗಾರ ಆಗಿದ್ದಾರೆ.
ಇದಲ್ಲದೇ ಸ್ಕೋರ್ ಗಳಿಕೆಯಲ್ಲೂ ಸೂರ್ಯ ರೆಕಾರ್ಡ್ ಮಾಡಿದ್ದಾರೆ. ಶಿಖರ್ ಧವನ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್‌ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ಪ್ರಸ್ತುತ ಸೂರ್ಯ 51 ಪಂದ್ಯದಲ್ಲಿ 49 ಇನ್ನಿಂಗ್ಸ್ಗಳನ್ನು ಆಡಿದ್ದು, ಅವರು ಮೂರು ಶತಕಗಳು ಮತ್ತು 14 ಅರ್ಧಶತಕಗಳೊಂದಿಗೆ 45.64 ಸರಾಸರಿಯಲ್ಲಿ 174ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 1,780 ರನ್ ಗಳಿಸಿದ್ದಾರೆ. 117 ಅವರ ಉತ್ತಮ ಸ್ಕೋರ್ ಆಗಿದೆ. ಧವನ್ 68 ಪಂದ್ಯಗಳಿಂದ 27.92ರ ಸರಾಸರಿಯಲ್ಲಿ 126ರ ಸ್ಟ್ರೈಕ್ ರೇಟ್‌ನಲ್ಲಿ 1759 ರನ್ ಗಳಿಸಿದ್ದಾರೆ. ಶಿಖರ್ ಟಿ20ಯಲ್ಲಿ 11 ಅರ್ಧಶತಕ ಕಲೆ ಹಾಕಿದ್ದಾರೆ.
ಮೊದಲ ಮೂರು ಸ್ಥಾನದಲ್ಲಿ ವಿರಾಟ್, ರೋಹಿತ್ ಮತ್ತು ರಾಹುಲ್ ಇದ್ದಾರೆ. ವಿರಾಟ್ ಕೊಹ್ಲಿ 115 ಪಂದ್ಯಗಳಿಂದ 52.73 ಸರಾಸರಿಯಲ್ಲಿ ಒಂದು ಶತಕ ಮತ್ತು 37 ಅರ್ಧಶತಕ ಸಹಿತ 4,008 ರನ್ ಗಳಸಿದ್ದಾರೆ. ರೋಹಿತ್ ಶರ್ಮಾ 148 ಪಂದ್ಯಗಳಲ್ಲಿ 4ಶತಕ ಮತ್ತು 29 ಅರ್ಧಶತಕವನ್ನು ಗಳಿಸಿದ್ದು, 31.32 ಸರಾಸರಿ ಮತ್ತು 139.24 ಸ್ಟ್ರೈಕ್ ರೇಟ್ನಿಂದ ಒಟ್ಟು 3,853 ರನ್ ಕಲೆಹಾಕಿದ್ದಾರೆ. ಕೆಎಲ್ ರಾಹುಲ್ 72 ಪಂದ್ಯಗಳಲ್ಲಿ 37.75 ಸರಾಸರಿಯಲ್ಲಿ 2,265 ರನ್ ಗಳಿಸಿದ್ದು, ಅದರಲ್ಲಿ ಎರಡು ಶತಕ ಮತ್ತು 22 ಅರ್ಧಶತಕ ಒಳಗೊಂಡಿವೆ.