ಗಯಾನ (ವೆಸ್ಟ್ ಇಂಡೀಸ್): ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸರಣಿಯನ್ನು ಸುಲಭವಾಗಿ ಕೈವಶ ಮಾಡಿಕೊಂಡಿತ್ತು. ಆದರೆ ವಿಂಡೀಸ್ ಟಿ20ಯಲ್ಲಿ ಪ್ರಬಲ ಪೈಪೋಟಿ ನೀಡುತ್ತಿದೆ. ಹಾರ್ದಿಕ್ ನಾಯಕತ್ವದಲ್ಲಿ ಐಪಿಎಲ್ ಸ್ಟಾರ್‌ಗಳು ಆತಿಥೇಯರ ವಿರುದ್ಧ ಗೆಲುವು ಕಾಣುವಲ್ಲಿ ಎಡವುತ್ತಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಎರಡರಲ್ಲಿ ಸೋಲುಂಡಿರುವ ಭಾರತ ಇನ್ನೊಂದು ಪಂದ್ಯ ಸೋತರೆ ಸರಣಿ ಬಿಟ್ಟುಕೊಟ್ಟಂತೆ.
ವಿಂಡೀಸ್ನಲ್ಲಿ ಸರಣಿ ಕ್ಲೀನ್‌ಸ್ವೀಪ್ ಸಾಧನೆ ಮಾಡಲು ಉಳಿದ ಮೂರು ಪಂದ್ಯಗಳನ್ನು ಗೆಲ್ಲುವುದು ಮೆನ್ ಇನ್ ಬ್ಲೂಗೆ ಅನಿವಾರ್ಯ. ಎರಡು ಪಂದ್ಯವನ್ನು ಗೆಲುವಿನಂಚಿನಲ್ಲಿ ಕಳೆದುಕೊಂಡಿರುವ ಭಾರತ ಮೂರನೇ ಪಂದ್ಯಕ್ಕೆ ಆಟಗಾರರಲ್ಲಿ ಬದಲಾವಣೆ ಮಾಡಿ ಗೆಲುವಿಗೆ ಮರಳುತ್ತದೋ ಅಥವಾ ಇದೇ ತಂಡದೊಂದಿಗೆ ಜಯಗಳಿಸುತ್ತೋ ಅನ್ನೋದನ್ನು ಕಾದುನೋಡಬೇಕು.
ಥ್ರಿಲ್ ಕೊಡದ ಗಿಲ್ ಆಟ: ಈ ವರ್ಷಾರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗೋಲ್ಡನ್ ಫಾರ್ಮ್ನಲ್ಲಿದ್ದ ಮತ್ತು ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದ ಶುಭಮನ್ ಗಿಲ್ ವಿಂಡೀಸ್ ಪ್ರವಾಸದಲ್ಲಿ ಮಂಕಾಗಿದ್ದಾರೆ. ವಿಂಡೀಸ್ ವಿರುದ್ಧ ಇದುವರೆಗೆ ಆಡಿದ 7 ಪಂದ್ಯದಲ್ಲಿ ಒಂದು ಅರ್ಧಶತಕ ಮಾತ್ರ ಇವರ ಬ್ಯಾಟ್‌ನಿಂದ ಮೂಡಿಬಂದಿದೆ. ಮೂರನೇ ಏಕದಿನ ಪಂದ್ಯದಲ್ಲಿ 85 ರನ್ ಗಳಿಸಿದ್ದೇ ಬೆಸ್ಟ್ ಸ್ಕೋರ್. ಟಿ20ಯಲ್ಲಿ ಆರಂಭಿಕರಾಗಿ ಕಳೆದೆರಡು ಪಂದ್ಯದಲ್ಲಿ 3 ಮತ್ತು 7 ರನ್ ಮಾತ್ರ ಕಲೆಹಾಕಿದ್ದಾರೆ. ಆರಂಭಿಕ ಜೋಡಿ ಪವರ್ ಪ್ಲೇ ಮುಗಿಯುವವರೆಗೆ ನಿಂತು ಅರ್ಧಶತಕಕ್ಕೂ ಹೆಚ್ಚು ಜೊತೆಯಾಡುವ ಅಗತ್ಯವಿದೆ.
ಡೆತ್ ಓವರ್ ಪ್ರಾಬ್ಲಂ: ಟೀಂ ಇಂಡಿಯಾಕ್ಕೆ ಡೆತ್ ಓವರ್ ಸಮಸ್ಯೆ ಕಾಡುತ್ತಿದೆ. ಇದನ್ನು ಬಗೆಹರಿಸಲು ಇನ್ನೂ ಆಗಿಲ್ಲ. ಮೊದಲ ಟಿ20ಯಲ್ಲಿ ಡೆತ್ ಓವರ್ನಲ್ಲಿ ವಿಕೆಟ್ ಕೊಟ್ಟು ರನ್ ಗಳಿಸಲು ಪರದಾಡಿ ಸೋಲು ಕಂಡರೆ, ಎರಡನೇ ಪಂದ್ಯದಲ್ಲಿ ಡೆತ್ ಓವರ್ನಲ್ಲಿ ವಿಕೆಟ್ ತೆಗೆದರೂ ರನ್ ಬಿಟ್ಟುಕೊಟ್ಟಿದ್ದರಿಂದ ಮಣಿಯಬೇಕಾಯಿತು. ಡೆತ್ ಓವರ್ ಕಂಟ್ರೋಲ್ ಮಾಡುವ ಬೌಲಿಂಗ್ ಮತ್ತು ಕೊನೆಯ ಓವರ್ಗಳಲ್ಲಿ ನಿಂತಾಡುವ ಫಿನಿಶರ್ಗಳು ತಂಡಕ್ಕೆ ಬೇಕಿದೆ.
ಟಿ20 ಟಾಪ್ ಬ್ಯಾಟರ್ ಸೂರ್ಯಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ ಕೊನೆಯ ಓವರ್ಗಳಲ್ಲಿ ಜವಾಬ್ದಾರಿಯನ್ನು ಮೈಮೇಲೆ ತೆಗೆದುಕೊಂಡು ಆಡುವ ತುರ್ತಿದೆ. ಯುವ ಬೌಲಿಂಗ್ ಪಡೆಗೆ ಕೋಚ್ ಡೆತ್ ಓವರ್ಗಳಲ್ಲಿ ಲೆಂತ್ ವೇರಿಯೇಷನ್ ಮೂಲಕ ಬ್ಯಾಟರ್ಗಳನ್ನು ಕಟ್ಟಿ ಹಾಕುವ ಕಲೆ ಕಲಿಸುವ ಅಗತ್ಯವಿದೆ. ಮುಖೇಶ್ ಮತ್ತು ಅರ್ಶ್‌ದೀಪ್ ಕೊನೆ ಓವರ್ ಒತ್ತಡದಲ್ಲಿ ಉತ್ತಮ ಲೆಂತ್ ಬೌಲಿಂಗ್ ಮಾಡಲೇಬೇಕು.
ಪೂರನ್ ಆರ್ಭಟ : ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಮೇಜರ್ ಕ್ರಿಕೆಟ್ ಲೀಗ್ನಲ್ಲಿ ಶತಕ ಗಳಿಸಿ ಮುಂಬೈ ನ್ಯೂಯಾರ್ಕ್ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟ ಪೂರನ್ ಭಾರತಕ್ಕೆ ಎರಡೂ ಪಂದ್ಯದಲ್ಲಿ ಮಾರಕರಾಗಿದ್ದಾರೆ. ಅವರ ಬಿರುಸಿನ ಬ್ಯಾಟಿಂಗ್ ನಿಯಂತ್ರಿಸಲು ಭಾರತೀಯ ಬೌಲರ್ಗಳಿಗೆ ಆಗುತ್ತಿಲ್ಲ. ಕ್ರೀಸ್‌ಗೆ ಬಂದೊಡನೆಯೇ ಬೌಂಡರಿ, ಸಿಕ್ಸರ್ ಮೂಲಕ ಪೂರನ್ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಇವರ ಜೊತೆಗೆ ನಾಯಕನೂ ಉತ್ತಮ ಸ್ಕೋರ್ ಮಾಡುತ್ತಿದ್ದಾರೆ. ಈ ಇಬ್ಬರು ಬ್ಯಾಟರ್ಗಳನ್ನು ಕಟ್ಟಿ ಹಾಕಿದ್ದಲ್ಲಿ 3ನೇ ಪಂದ್ಯ ಭಾರತದ ಪಾಲಾಗಬಹುದು ಎನ್ನುವುದು ಅಂದಾಜು.
ಪಿಚ್ ಹೇಗಿದೆ?: ಕಳೆದ ಪಂದ್ಯದಲ್ಲಿ ಮಧ್ಯಮ ವೇಗಿ ಮತ್ತು ಸ್ಪಿನ್ನರ್ಗಳಿಗೆ ಪಿಚ್ನಲ್ಲಿ ವಿಕೆಟ್ ಸಿಕ್ಕಿದೆ. ಹೀಗಾಗಿ ಮೂರನೇ ಟಿ20ಯಲ್ಲೂ ಮೂವರು ಸ್ಪಿನ್ನರ್ಗಳು ಆಡುವ ಸಾಧ್ಯತೆ ಕಾಣಿಸುತ್ತಿದೆ. ಈ ಪಿಚ್ನಲ್ಲಿ ಸರಾಸರಿ ಸ್ಕೋರ್ 130ರಿಂದ 150 ಆಗಿದೆ. ಹೀಗಾಗಿ 150 ಪ್ಲಸ್ ರನ್ ಗುರಿ ನೀಡಿದರೆ ತಂಡಕ್ಕೆ ಗೆಲುವು ಸುಲಭವಾದೀತು.