ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಮೊದಲೆರಡು ಪಂದ್ಯ ಗೆದ್ದಿರುವ ಉತ್ಸಾಹದಲ್ಲಿರುವ ಶಿಖರ್ ಧವನ್ ಬಳಗ ಇಂದಿನ ಪಂದ್ಯ ಗೆದ್ದು ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಕ್ಯಾಪ್ಟನ್ ಶಿಖರ್ ಧವನ್ ಹಾಗೂ ಟೀಂ ಇಂಡಿಯಾ ಹೊಸದೊಂದು ಇತಿಹಾಸ ಸೃಷ್ಟಿ ಮಾಡಲಿದೆ.
ಟೀಂ ಇಂಡಿಯಾ: ಶಿಖರ್ ಧವನ್, ಶುಬ್ಮನ್ ಗಿಲ್,ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್(ವಿ.ಕೀ), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಲ್, ಪ್ರಸಿದ್ಧ ಕೃಷ್ಣ
ಇಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಹೆಚ್ಚಿನ ಬದಲಾವಣೆ ಮಾಡಿಲ್ಲ. ಆವೇಶ್ ಖಾನ್ ಬದಲಿಗೆ ಪ್ರಸಿದ್ಧ ಕೃಷ್ಣ ಆಡುವ 11ರ ಬಳಗದಲ್ಲಿ ಚಾನ್ಸ್ ಪಡೆದುಕೊಂಡಿದ್ದಾರೆ. ಉಳಿದಂತೆ ಈ ಹಿಂದಿನ ಪಂದ್ಯದಲ್ಲಿ ಕಣಕ್ಕಿಳಿದ ತಂಡದ ಜೊತೆ ಕೊನೆಯ ಪಂದ್ಯ ಆಡಲು ನಿರ್ಧರಿಸಲಾಗಿದೆ. ಆದರೆ, ಇಂದಿನ ಪಂದ್ಯಕ್ಕಾಗಿ ವೆಸ್ಟ್ ಇಂಡೀಸ್ ಆಡುವ 11ರ ಬಳಗದಲ್ಲಿ 3 ಬದಲಾವಣೆ ಮಾಡಿದೆ. ಅನುಭವಿ ಹೊಲ್ಡರ್, ಕಿಮೋ ಹಾಗೂ ಕಾರ್ಟೆ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿರಿ:ವಿಶ್ವ ದಾಖಲೆಯತ್ತ ಶಿಖರ್ ಧವನ್ ಚಿತ್ತ.. ನಾಳೆಯ ಪಂದ್ಯ ಗೆದ್ದರೆ ಸೃಷ್ಟಿಯಾಗಲಿದೆ ಹೊಸ ಇತಿಹಾಸ!
ವೆಸ್ಟ್ ಇಂಡೀಸ್:ಶಾಯ್ ಹೋಪ್(ವಿ.ಕೀ), ಬ್ರಾಂಡನ್ ಕಿಂಗ್, ಕೀಸಿ ಕಾರ್ಟಿ, ಶಮರ್ ಬ್ರೂಕ್ಸ್, ನಿಕೋಲಸ್ ಪೂರನ್(ಕ್ಯಾಪ್ಟನ್), ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಕೀಮೋ ಪಾಲ್, ಅಕೇಲ್ ಹೋಸೇನ್, ಹೇಡನ್ ವಾಲ್ಷ್, ಜೇಡನ್ ಸೀಲ್ಸ್
ಉತ್ತಮ ಪ್ರದರ್ಶನದ ಹೊರತಾಗಿ ಕೂಡ ವೆಸ್ಟ್ ಇಂಡೀಸ್ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಸೋಲಿನ ಸರಪಳಿ ಕಳಚಿಕೊಳ್ಳುವ ತವಕದಲ್ಲಿದೆ. ಜೊತೆಗೆ ವೈಟ್ವಾಷ್ ಮುಖಭಂಗ ತಪ್ಪಿಸಿಕೊಳ್ಳಲು ಮುಂದಾಗಿದೆ.
ಹೊಸ ರೆಕಾರ್ಡ್ ಬರೆಯಲಿರುವ ಕ್ಯಾಪ್ಟನ್ ಧವನ್: ಅನುಭವಿ ಆಟಗಾರರ ಮಧ್ಯೆ ಯುವ ಪ್ಲೇಯರ್ಸ್ ಜೊತೆ ಕ್ಯಾಪ್ಟನ್ ಶಿಖರ್ ಧವನ್ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ ಶಿಖರ್ ಬಳಗ ಗೆಲುವು ದಾಖಲು ಮಾಡಿದರೆ, ಟೀಂ ಇಂಡಿಯಾದ ಯಾವುದೇ ಕ್ಯಾಪ್ಟನ್ ನಿರ್ಮಾಣ ಮಾಡದಂತಹ ರೆಕಾರ್ಡ್ ಗಬ್ಬರ್ ಸಿಂಗ್ ಹೆಸರಿನಲ್ಲಿ ರಚನೆಯಾಗಲಿದೆ. ಕೆರಿಬಿಯನ್ ನೆಲದಲ್ಲಿ ಇಲ್ಲಿಯವರೆಗೆ ಟೀಂ ಇಂಡಿಯಾದ ಯಾವುದೇ ಕ್ಯಾಪ್ಟನ್ ಕ್ಲೀನ್ ಸ್ವೀಪ್ ಸಾಧನೆ ಮಾಡಿಲ್ಲ. ಈ ಅವಕಾಶ ಧವನ್ಗೆ ಲಭ್ಯವಾಗಿದ್ದು, ಇವತ್ತಿನ ಪಂದ್ಯದ ಫಲಿತಾಂಶದ ಮೇಲೆ ಎಲ್ಲವೂ ನಿಂತಿದೆ.
ಇತಿಹಾಸ ಸೃಷ್ಟಿಸಲಿರುವ ಯಂಗ್ ಇಂಡಿಯಾ: ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ಮೊದಲ ಬಾರಿಗೆ ಕೆರಿಬಿಯನ್ ನಾಡಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಲಿದೆ. ಈ ಮೂಲಕ ಹೊಸದೊಂದು ದಾಖಲೆ ನಿರ್ಮಾಣಗೊಳ್ಳಲಿದೆ. ಆದರೆ, ಉತ್ತಮ ಪ್ರದರ್ಶನದ ಹೊರತಾಗಿ ಕೂಡ ಎರಡು ಪಂದ್ಯಗಳಲ್ಲಿ ಸೋತಿರುವ ವೆಸ್ಟ್ ಇಂಡೀಸ್ ಈ ಪಂದ್ಯದಲ್ಲಿ ತಿರುಗೇಟು ನೀಡುವ ತವಕದಲ್ಲಿದೆ.