ತರೌಬಾ (ಟ್ರಿನಿಡಾಡ್):ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ನಿರ್ಣಾಯಕ ಪಂದ್ಯದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ವಹಿಸಿಕೊಂಡಿದ್ದು, ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಇಂದಿನ ಪಂದ್ಯದಲ್ಲೂ ವಿಶ್ರಾಂತಿ ನೀಡಲಾಗಿದೆ. ಲಾರಾ ಮೈದಾನದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಬೌಲಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ.
ಭಾರತ ತಂಡದಲ್ಲಿ ಪ್ರಮುಖ ಎರಡು ಬದಲಾವಣೆಗಳನ್ನು ಮಾಡಿದ್ದು ಕಳೆದೆರಡು ಪಂದ್ಯಗಳಲ್ಲಿ ಆಡಿದ್ದ ಉಮ್ರಾನ್ ಮಲಿಕ್ ಜಾಗದಲ್ಲಿ ರುತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ಮಾಡಿಕೊಡಲಾಗಿದ್ದು, ಕಳೆದ ಪಂದ್ಯದಲ್ಲಿ ಆಡಿದ್ದ ಅಕ್ಷರ್ ಪಟೇಲ್ ಬದಲಿಗೆ ಜಯದೇವ್ ಉನಾದ್ಕತ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಅದೇ ತಂಡದಲ್ಲಿ ಮುಂದುವರೆದಿದೆ.
ಭಾರತ ತಂಡ ನಾಯಕ ಹಾರ್ದಿಕ್ ಸೇರಿ ನಾಲ್ವರು ವೇಗಿಗಳ ಜೊತೆ ಮೈದಾನಕ್ಕಿಳಿದಿದೆ. ಹಾರ್ದಿಕ್ ಪಾಂಡ್ಯ ಕಳೆದೆರಡು ಪಂದ್ಯದಲ್ಲಿ 5 ಪ್ಲೆಸ್ ಓವರ್ಗಳನ್ನು ಮಾಡುತ್ತಿದ್ದಾರೆ. ದೇಶಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಉನಾದ್ಕತ್ ಇಂದು ಮೈದಾನಕ್ಕಿಳಿಯುತ್ತಿದ್ದು, ಅವರ ಬೌಲಿಂಗ್ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.
ಸೂರ್ಯ, ಸಂಜುಗೆ ಮತ್ತೊಂದು ಅವಕಾಶ:ಸೂರ್ಯ ಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ಗೆ ಇಂದಿನ ಪಂದ್ಯದಲ್ಲಿ ಮತ್ತೊಂದು ಅವಕಾಶ ನೀಡಲಾಗಿದೆ. ಟಿ20 ಮಾದರಿಯಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಸೂರ್ಯ ಕುಮಾರ್ ಯಾದವ್ ಏಕದಿನ ಕ್ರಿಕೆಟ್ನಲ್ಲಿ ದೊಡ್ಡ ಮೊತ್ತದ ಸ್ಕೋರ್ ಮಾಡುವಲ್ಲಿ ಎಡವಿದ್ದಾರೆ. ಇನ್ನು ತುಂಬಾ ಸಮಯ ತಂಡದಿಂದ ಹೊರಗುಳಿದಿದ್ದ ಸಂಜು ಸ್ಯಾಮ್ಸನ್ಗೆ ಎರಡನೇ ಪಂದ್ಯದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಆ ಪಂದ್ಯದಲ್ಲಿ 9 ರನ್ ಔಟ್ ಆಗಿದ್ದರು. ಇಂದಿನ ಮೂರನೇ ಏಕದಿನ ಪಂದ್ಯದಲ್ಲಿ ಮತ್ತೆ ಅವರಿಗೆ ಅವಕಾಶ ನೀಡಲಾಗಿದೆ.