ಪೋರ್ಟ್ ಆಫ್ ಸ್ಪೇನ್ :ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಡ್ರಾ ಆಗಿದೆ. ಅಂತಿಮ ದಿನದಾಟಕ್ಕೆ ವರುಣ ಅಡ್ಡಿಪಡಿಸಿದ್ದರಿಂದ ಒಂದೇ ಒಂದು ಎಸೆತವನ್ನೂ ಕಾಣದೇ ಪಂದ್ಯ ಮುಗಿಯಿತು. ಈ ಮೂಲಕ ಕೆರಿಬಿಯನ್ನರನ್ನು ವೈಟ್ ವಾಶ್ ಮಾಡುವ ರೋಹಿತ್ ಪಡೆಯ ರಣತಂತ್ರ ಫಲಿಸಲಿಲ್ಲ. 1-0 ರ ಅಂತರದಿಂದ ಭಾರತ ಸರಣಿ ವಶಪಡಿಸಿಕೊಂಡಿದೆ. ಈ ಮೂಲಕ ಭಾರತ ಕ್ರಿಕೆಟ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಅಭಿಯಾನದಲ್ಲಿ ಶುಭಾರಂಭ ಮಾಡಿದೆ.
ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಗೆಲುವಿಗೆ ಭಾರತ 365 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ನಾಲ್ಕನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿತ್ತು. ಕೆರಿಬಿಯನ್ನರ ಗೆಲುವಿಗೆ ಐದನೇ ದಿನಕ್ಕೆ 289 ರನ್‌ಗಳ ಅಗತ್ಯವಿತ್ತು. ಇದೇ ಸಮಯದಲ್ಲಿ ಭಾರತಕ್ಕೂ ಗೆಲುವಿಗೆ 8 ವಿಕೆಟ್‌ಗಳು ಬೇಕಿತ್ತು. ಆದರೆ ಉಭಯ ತಂಡಗಳ ಗೆಲುವಿನ ಆಸೆಗೆ ಮಳೆರಾಯ ತಣ್ಣೀರೆರಚಿದ.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 438 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ನಲ್ಲಿ 255 ರನ್‌ಗಳಿಗೆ ಸರ್ವಪತನ ಕಂಡಿತು. ಟೀಂ ಇಂಡಿಯಾ 183 ರನ್‌ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಎರಡು ವಿಕೆಟ್‌ಗೆ 181 ರನ್ ಗಳಿಸುವ ಮೂಲಕ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿತ್ತು. ಒಟ್ಟು 364 ರನ್‌ಗಳ ಮುನ್ನಡೆ ಸಾಧಿಸಿತ್ತು. ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.