ಎರಡು ತಿಂಗಳ ಐಪಿಎಲ್ ಕ್ರಿಕೆಟ್ ಹಬ್ಬದ ಬಳಿಕ ಇಂಗ್ಲೆಂಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಇದಾದ ನಂತರದ ಒಂದು ತಿಂಗಳ ಬಿಡುವಿನ ಬಳಿಕ ಭಾರತ ತಂಡವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಜುಲೈ 12ರಿಂದ ಪಂದ್ಯಗಳು ಆರಂಭವಾಗಲಿವೆ. ಈ ಪ್ರವಾಸದಲ್ಲಿ ಭಾರತ ತಂಡ ವಿಂಡೀಸ್ ವಿರುದ್ಧ 2 ಟೆಸ್ಟ್, 3 ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ.
ಟೆಸ್ಟ್ ಮತ್ತು ಏಕದಿನ ಪಂದ್ಯಕ್ಕೆ ಬಿಸಿಸಿಐ ಈಗಾಗಲೇ ತಂಡಗಳನ್ನು ಪ್ರಕಟಿಸಿದೆ. ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ ನಾಯಕ ಮತ್ತು ಅಜಿಂಕ್ಯ ರಹಾನೆ ಉಪನಾಯಕರಾಗಿದ್ದಾರೆ. ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ ನಾಯಕ ಮತ್ತು ಹಾರ್ದಿಕ್ ಪಾಂಡ್ಯ ಉಪನಾಯಕರಾಗಿದ್ದಾರೆ. ಆಗಸ್ಟ್ 3ರಿಂದ 13ರ ವರೆಗೆ ನಡೆಯಲಿರುವ 5 ಟಿ20ಗೆ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಈ ತಂಡದಲ್ಲಿ ಹೊಸ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇದ್ದಾಗಲೇ ಮೂರು ಮಾದರಿಯ ಕ್ರಿಕೆಟ್‌ಗೆ ಬೇರೆ ಬೇರೆ ನಾಯಕರನ್ನು ನೇಮಿಸಬೇಕು ಎಂದು ಅಭಿಪ್ರಾಯವಿತ್ತು. ಆದರೆ ವಿರಾಟ್ ನಂತರ ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಹೊಣೆ ನೀಡಲಾಯಿತಾದರೂ ಅವರೇ ಮೂರೂ ಮಾದರಿಯನ್ನು ನಿರ್ವಹಿಸುತ್ತಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ನಾಯಕತ್ವ ನಿರ್ವಹಿಸಿದ್ದರು. ಹಾರ್ದಿಕ್ ಮುಂದಾಳತ್ವದಲ್ಲಿ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಮತ್ತು ಈ ವರ್ಷ ರನ್ನರ್ ಅಪ್ ಆಗಿದೆ. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹಾರ್ದಿಕ್ಗೆ ನಾಯಕತ್ವ ಕೊಡುವ ಸಾಧ್ಯತೆ ಹೆಚ್ಚಿದೆ. ಸತತ ಪಂದ್ಯಗಳನ್ನು ಆಡುತ್ತಿರುವ ರೋಹಿತ್ ಶರ್ಮಾಗೆ ಏಷ್ಯಾಕಪ್ ಮತ್ತು ವಿಶ್ವಕಪ್ ಹಿನ್ನೆಲೆಯಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.