ಗಯಾನಾ (ವೆಸ್ಟ್ ಇಂಡೀಸ್): ಭಾರತದ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಸಿಡಿಸಿ ತಂಡದ ಗೆಲುವಿನ ರೂವಾರಿಯಾದ ನಿಕೋಲಸ್ ಪೂರನ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನೀತಿ ಸಂಹಿತೆ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ. ವಿಕೆಟ್ ಕೀಪರ್ ಕೂಡಾ ಆಗಿರುವ ಪೂರನ್, ಪಂದ್ಯದಲ್ಲಿ 1ನೇ ಹಂತದ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದು, ಪಂದ್ಯದ ಸಂಭಾವನೆಯ ಶೇಕಡಾ 15ರಷ್ಟು ದಂಡ ಪಾವತಿಸಬೇಕಿದೆ.
ಅಂಪೈರ್ ನೀಡಿದ ತೀರ್ಪು ಟೀಕಿಸಿದ್ದಕ್ಕಾಗಿ ದಂಡದ ಮೂಲಕ ಬಿಸಿ ಮುಟ್ಟಿಸಲಾಗಿದೆ ಎಂದು ಐಸಿಸಿ ತಿಳಿಸಿದೆ. ಭಾರತದ ಇನ್ನಿಂಗ್ಸ್‌ನ 4ನೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯೂ ನಿರ್ಧಾರವನ್ನು ಪರಿಶೀಲಿಸಲಾಗಿತ್ತು. ಆಗ ನಾಟೌಟ್ ನಿರ್ಧಾರ ಹೊರಬಿತ್ತು. ಇದನ್ನು ಆಟಗಾರರ ನಡುವೆ ವಿಮರ್ಶೆ ಮಾಡಿಕೊಳ್ಳುವಾಗ ಅಂಪೈರ್ ನಡೆಗೆ ಪೂರನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಪೂರನ್ ಮತ್ತು ಆಟಗಾರರ ಬೆಂಬಲ ಸಿಬ್ಬಂದಿ ನೀತಿ ಸಂಹಿತೆಯ ಆರ್ಟಿಕಲ್ 2.7 ಅನ್ನು ಉಲ್ಲಂಘಿಸಿದೆ ಎಂದು ಐಸಿಸಿ ಹೇಳಿದೆ.
ಪೂರನ್ ಅಪರಾಧ ಒಪ್ಪಿಕೊಂಡ ನಂತರ ಆನ್‌ಫೀಲ್ಡ್ ಅಂಪೈರ್‌ಗಳಾದ ಲೆಸ್ಲಿ ರೀಫರ್ ಮತ್ತು ನಿಗೆಲ್ ಡುಗಿಡ್, ಮೂರನೇ ಅಂಪೈರ್ ಗ್ರೆಗೊರಿ ಬ್ರಾಥ್‌ವೈಟ್ ಮತ್ತು ನಾಲ್ಕನೇ ಅಧಿಕೃತ ಪ್ಯಾಟ್ರಿಕ್ ಗುಸ್ಟರ್ಡ್ ಹಾಗೂ ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ಪ್ರಸ್ತಾಪಿಸಿದ ನಿರ್ಬಂಧಗಳನ್ನು ಒಪ್ಪಿಕೊಂಡು ಔಪಚಾರಿಕ ವಿಚಾರಣೆ ಇಲ್ಲದೇ ಜುಲ್ಮಾನೆ ಹೇರಲಾಗಿದೆ. ಇದು ಕಳೆದ 24 ತಿಂಗಳ ಮೊದಲ ಅಪರಾಧವಾಗಿದ್ದು, ಪೂರನ್ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಕೊಂಡಿದೆ.