ಪೋರ್ಟ್ ಆಫ್ ಸ್ಪೇನ್:ಕ್ರಿಕೆಟ್ನಲ್ಲಿ ಸ್ಪಿನ್ ಅಂದ್ರೇನೆ ಹಾಗೆ. ಅದ್ಯಾವಾಗ ಚೆಂಡು ತಿರುವು ಪಡೆದು ಒಳನುಗ್ಗಿ ವಿಕೆಟ್ ಉರುಳಿಸುತ್ತದೆ ಎಂಬುದು ತಿಳಿಯದು. ಕ್ರಿಕೆಟ್ ಲೋಕ ಕಂಡ ಅಪ್ರತಿಮ ಸ್ಪಿನ್ ಮಾಂತ್ರಿಕರೆಂದರೆ, ಅದು ಶ್ರೀಲಂಕಾದ ಮುತ್ತಯ್ಯ ಮುರಳೀಧರ್, ಆಸ್ಟ್ರೇಲಿಯಾದ ಶೇನ್ ವಾರ್ನ್ ಮತ್ತು ಭಾರತದ ಅನಿಲ್ ಕುಂಬ್ಳೆ. ಕುಂಬ್ಳೆ ನಿವೃತ್ತಿ ಬಳಿಕ ಹರ್ಭಜನ್ ಸಿಂಗ್ ಭಾರತ ಕ್ರಿಕೆಟ್ನ ಸ್ಪಿನ್ ಮಾಂತ್ರಿಕರಾಗಿದ್ದರು. ಹರ್ಭಜನ್ ತೆರೆಮರೆಗೆ ಸರಿದ ಬಳಿಕ ಉದಯಿಸಿದ್ದು ರವಿಚಂದ್ರನ್ ಅಶ್ವಿನ್.
ತಮಿಳುನಾಡಿನ ರವಿಚಂದ್ರನ್ ಅಶ್ವಿನ್ ಭಾರತ ಕ್ರಿಕೆಟ್ನ ಸದ್ಯದ ಟಾಪ್ ಸ್ಪಿನ್ ಬೌಲರ್. ತಮ್ಮ ಕೇರಂ ಶೈಲಿಯ ಮೂಲಕ ವಿಶ್ವಮಾನ್ಯರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನ ನಂಬರ್ 1 ಬೌಲರ್ ಆಗಿರುವ ಈ ಆಫ್ ಸ್ಪಿನ್ನರ್, ಸದ್ಯ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ತಮ್ಮೆಲ್ಲ ಪಟ್ಟುಗಳನ್ನು ಪ್ರದರ್ಶಿಸುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ 11 ವಿಕೆಟ್ ಉರುಳಿಸಿ ಕೆರಿಬಿಯನ್ನರನ್ನು ಪುಡಿಗಟ್ಟಿದ್ದ ಸ್ಪಿನ್ ಮಾಂತ್ರಿಕ, 2ನೇ ಟೆಸ್ಟ್ನಲ್ಲಿ ಪಡೆದಿದ್ದು ಒಂದು ವಿಕೆಟ್ ಆದರೂ, ಉತ್ತಮವಾಗಿ ಆಡುತ್ತಿದ್ದ ನಾಯಕ ಕ್ರೆಗ್ ಬ್ರಾಥ್ವೇಟ್ರನ್ನು ಕಣ್ಣುಮಿಟುಕಿಸುವ ಅವಧಿಯೊಳಗೆ ಪೆವಿಲಿಯನ್ಗೆ ಕಳುಹಿಸಿದ್ದರು.
ಮ್ಯಾಜಿಕ್ ಡೆಲಿವರಿ: ಭಾರತ ನೀಡಿರುವ ಬೃಹತ್ ಮೊತ್ತಕ್ಕೆ ಉತ್ತರವಾಗಿ ವಿಂಡೀಸ್ ಪಡೆ ಉತ್ತಮವಾಗಿ ಬ್ಯಾಟ್ ಮಾಡುತ್ತಿದೆ. ಕೆರಿಬಿಯನ್ ನಾಯಕ ಕ್ರೆಗ್ ಬ್ರಾಥ್ವೆಟ್ 75 ರನ್ ಗಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. 5 ಬೌಂಡರಿ 1 ಸಿಕ್ಸರ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಆರ್. ಅಶ್ವಿನ್ 72ನೇ ಓವರ್ನ 4 ನೇ ಎಸೆತದಲ್ಲಿ ವಿಂಡೀಸ್ ನಾಯಕನಿಗೆ ಶಾಕ್ ನೀಡಿದರು.