ತರೌಬಾ (ಟ್ರಿನಿಡಾಡ್ ಮತ್ತು ಟೊಬಾಗೊ):ಇಲ್ಲಿನ ಬ್ರಿಯಾನ್ ಲಾರಾ ಮೈದಾನದಲ್ಲಿ ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಜೇಸನ್ ಹೋಲ್ಡರ್, ರೊಮಾರಿಯೊ ಶೆಪರ್ಡ್ ಮತ್ತು ಒಬೆಡ್ ಮೆಕಾಯ್ ಅವರ ಅದ್ಭುತ ಬೌಲಿಂಗ್ ದಾಳಿಗೆ ಬೆದರಿದ ಟೀಂ ಇಂಡಿಯಾ 4 ರನ್ಗಳಿಂದ ವಿಂಡೀಸ್ ಎದುರು ಸೋತಿದೆ. ಅಂತಿಮ ಓವರ್ಗಳಲ್ಲಿ ರನ್ ಗಳಿಸಲು ಪರದಾಡಿದ ಭಾರತ ಅಲ್ಪ ಅಂತರದ ಸೋಲುಂಡಿದ್ದು, 5 ಪಂದ್ಯಗಳ ಸರಣಿಯಲ್ಲಿ ಕೆರಿಬಿಯನ್ನರು 1-0 ಮುನ್ನಡೆ ಸಾಧಿಸಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ಗಳಿದ ವೆಸ್ಟ್ ಇಂಡೀಸ್ಗೆ ಸ್ಪಿನ್ನರ್ ಯುಜುವೇಂದ್ರ ಚಹಲ್ ತಮ್ಮ ಮೊದಲ ಎಸೆತದಲ್ಲೇ ಆಘಾತ ನೀಡಿದರು. 6 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿದ್ದ ಕೈಲ್ ಮೇಯರ್ಸ್ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ನಂತರ ಓವರ್ನ ಮೂರನೇ ಬಾಲ್ನಲ್ಲಿ ಮತ್ತೋರ್ವ ಆರಂಭಿಕ ಬ್ಯಾಟರ್ ಬ್ರಾಂಡನ್ ಕಿಂಗ್ (28 ರನ್) ಅವರನ್ನೂ ಕೂಡ ಚಹಲ್ ಪೆವಿಲಿಯನ್ಗೆ ಅಟ್ಟಿದರು.
ಬಳಿಕ ಬಂದ ನಿಕೋಲಸ್ ಪೂರನ್ ಅಬ್ಬರದ ಬ್ಯಾಟಿಂಗ್ ಮಾಡಿದರು. ಮೊದಲ ಎಸೆತದಿಂದಲೇ ಬೌಂಡರಿ ಮೂಲಕ ಖಾತೆ ತೆರೆದ ಪೂರನ್ ಕೆಲ ಆಕರ್ಷಕ ಹೊಡೆತಗಳನ್ನು ಬಾರಿಸಿದರು. 34 ಎಸೆತಗಳಲ್ಲಿ 41 ರನ್ ಗಳಿಸಿ ಸಿಕ್ಸರ್ ಸಿಡಿಸುವ ಯತ್ನದಲ್ಲಿ ತಿಲಕ್ ವರ್ಮಾಗೆ ಕ್ಯಾಚ್ ನೀಡಿದರು. ಇನ್ನೊಂದೆಡೆ ನಾಯಕನ ಆಟವಾಡಿದ ರೊವ್ಮನ್ ಪೊವೆಲ್ 32 ಎಸೆತಗಳಲ್ಲಿ 48 ರನ್ ಸಿಡಿಸಿ, ಕೇವಲ 2 ರನ್ಗಳಿಂದ ಅರ್ಧಶತಕದಿಂದ ವಂಚಿತರಾದರು.
ಇನ್ನುಳಿದಂತೆ ಹೇಟ್ಮೇರ್ 10 ಹಾಗೂ ರೊಮಾರಿಯೋ ಶೆಫರ್ಡ್ 4 ಹಾಗೂ ಜೇಸನ್ ಹೋಲ್ಡರ್ 6 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ವಿಂಡೀಸ್ 6 ವಿಕೆಟ್ ಕಳೆದುಕೊಂಡು 149 ರನ್ ಪೇರಿಸಿತು. ಭಾರತದ ಪರ ಅರ್ಷದೀಪ್ ಹಾಗೂ ಚಹಲ್ ತಲಾ ಎರಡು ಮತ್ತು ಹಾರ್ದಿಕ್, ಕುಲದೀಪ್ ಒಂದೊಂದು ವಿಕೆಟ್ ಕಬಳಿಸಿದರು.
ಭಾರತದ ಆರಂಭಿಕರ ವೈಫಲ್ಯ:ಬಳಿಕ 150 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭದಿಂದಲೂ ಎಡವುತ್ತ ಸಾಗಿತು. ತಂಡದ ಮೊತ್ತ 5 ರನ್ಗಳಾಗಿದ್ದಾಗಲೇ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ರನ್ನು ಕೇವಲ 3 ರನ್ಗೆ ಅಕೇಲ್ ಹೊಸೈನ್ ಎಸೆತದಲ್ಲಿ ನಿಕೋಲಸ್ ಪೂರನ್ ಸ್ಟಂಪ್ ಔಟ್ ಮಾಡಿದರು. ಬಳಿಕ ಬಂದ ಸೂರ್ಯಕುಮಾರ್ ಯಾದವ್ ಅವರು ಅಕೇಲ್ ಮತ್ತು ಅಲ್ಜಾರಿ ಜೋಸೆಫ್ ಬೌಲಿಂಗ್ನಲ್ಲಿ ಅದ್ಭುತ ಹೊಡೆತಗಳ ಮೂಲಕ ಬೌಂಡರಿ, ಸಿಕ್ಸರ್ ಸಿಡಿಸಿದರು. ಆದರೆ, ಇದೇ ವೇಳೆ 9 ಎಸೆತಗಳಲ್ಲಿ 6 ರನ್ ಗಳಿಸಿದ್ದ ಇಶಾನ್ ಕಿಶನ್ ಒಬೆಡ್ ಮೆಕಾಯ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಸೂರ್ಯ-ತಿಲಕ್ ಜೊತೆಯಾಟ:ನಂತರ ಕ್ರೀಸ್ಗಳಿಸಿದ ಯುವ ಬ್ಯಾಟರ್ ತಿಲಕ್ ವರ್ಮಾ ಪದಾರ್ಪಣಾ ಪಂದ್ಯದಲ್ಲೇ ಮಿಂಚಿನ ಬ್ಯಾಟಿಂಗ್ ನಡೆಸಿದರು. ಸೂರ್ಯಕುಮಾರ್ ಜೊತೆಗೂಡಿ 39 ರನ್ (2 ಬೌಂಡರಿ, 3 ಸಿಕ್ಸರ್) ಜೊತೆಯಾಟವಾಡಿದರು. ತಂಡದ ಮೊತ್ತ 67 ರನ್ ಆಗಿದ್ದಾಗ 21 ರನ್ ಗಳಿಸಿದ್ದ ಸೂರ್ಯಕುಮಾರ್ ಹೋಲ್ಡರ್ ಎಸೆತದಲ್ಲಿ ಔಟಾದರು. ಇದರ ಬೆನ್ನಲ್ಲೇ ತಿಲಕ್ ವರ್ಮಾ ಕೂಡ ಪೆವಿಲಿಯನ್ ಸೇರಿಕೊಂಡರು.
ತದನಂತರ ನಾಯಕ ಹಾರ್ದಿಕ್ ಪಾಂಡ್ಯ 19, ಸಂಜು ಸ್ಯಾಮ್ಸನ್ 12 ಹಾಗೂ ಅಕ್ಷರ್ ಪಟೇಲ್ 13 ರನ್ ಗಳಿಸಿದ್ದು, ತಂಡದ ಮೊತ್ತದ ವೇಗ ಹೆಚ್ಚಿಸುವಲ್ಲಿ ವಿಫಲರಾದರು. ಕೊನೆಯ ಎರಡು ಓವರ್ಗಳಲ್ಲಿ ಭಾರತದ ಗೆಲುವಿಗೆ 21 ರನ್ ಅಗತ್ಯವಿತ್ತು. 19ನೇ ಓವರ್ನಲ್ಲಿ ಅರ್ಷದೀಪ್ (12 ರನ್) 2 ಬೌಂಡರಿ ಬಾರಿಸಿದರು. ಅಂತಿಮ ಓವರ್ನಲ್ಲಿ ಜಯ ಸಾಧಿಸಲು 10 ರನ್ ಬೇಕಿದ್ದಾಗ ಕೇವಲ 5 ರನ್ ಗಳಿಸಲಷ್ಟೇ ಶಕ್ತವಾದ ಟೀಂ ಇಂಡಿಯಾ 4 ರನ್ ಅಂತರದ ಸೋಲು ಕಂಡಿತು.
ಡೆತ್ ಓವರ್ಗಳಲ್ಲಿ ನಿಧಾನಗತಿಯ ಎಸೆತಗಳನ್ನು ಪ್ರಯೋಗಿಸಿದ ಕೆರಿಬಿಯನ್ನರು ರೋಚಕ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು. 19 ರನ್ಗೆ 2 ವಿಕೆಟ್ ಪಡೆದ ಹೋಲ್ಡರ್ ಪ್ಲೇಯರ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿದರು. ರೊಮಾರಿಯೊ ಶೆಪರ್ಡ್ ಮತ್ತು ಒಬೆಡ್ ಮೆಕಾಯ್ ತಲಾ 2 ವಿಕೆಟ್ ಪಡೆದರು. ಸರಣಿಯ 2ನೇ ಪಂದ್ಯವು ಆಗಸ್ಟ್ 6ರ ಭಾನುವಾರ ಗಯಾನಾದಲ್ಲಿ ನಡೆಯಲಿದೆ.
ಇದನ್ನೂ ಓದಿ:Manoj Tiwary Retirement: ಎಲ್ಲ ಮಾದರಿಯ ಕ್ರಿಕೆಟ್‌ಗೆ 'ಸಚಿವ' ಮನೋಜ್ ತಿವಾರಿ ವಿದಾಯ