ಗಯಾನಾ:ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿಯೂ ಗಮನಾರ್ಹ ಪ್ರದರ್ಶನ ತೋರುವಲ್ಲಿ ವಿಫಲವಾದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲೂ ಕೂಡ ಸೋಲು ಕಂಡಿದೆ. 2 ವಿಕೆಟ್ ಜಯ ಸಾಧಿಸಿದ ಕೆರಿಬಿಯನ್ನರು 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದಾರೆ.
ಗಯಾನಾದ ಪ್ರಾವಿಡೆನ್ಸ್ ಮೈದಾನದಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯ ಕೈಗೊಂಡರು. ಆದರೆ, ಹಾರ್ದಿಕ್ ನಿರ್ಧಾರಕ್ಕೆ ತಕ್ಕ ಆಟ ಆಡುವಲ್ಲಿ ಟೀಂ ಇಂಡಿಯಾ ಬ್ಯಾಟರ್ಗಳು ವಿಫಲರಾದರು. ಆರಂಭದಿಂದಲೂ ರನ್ ಗಳಿಕೆಗೆ ಪರದಾಡಿದ ಭಾರತ 18 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಶುಭಮನ್ ಗಿಲ್ 7 ರನ್ ಗಳಿಸಿ ಔಟಾದರೆ, ಸೂರ್ಯಕುಮಾರ್ ಯಾದವ್ 1 ರನ್ಗೆ ಮೇಯರ್ಸ್ ಅವರ ಉತ್ತಮ ಕ್ಷೇತ್ರರಕ್ಷಣೆಯಿಂದ ರನೌಟ್ ಆಗಿ ಪೆವಿಲಿಯನ್ ಸೇರಿಕೊಂಡರು.
ಬಳಿಕ ಜೊತೆಯಾದ ಇಶಾನ್ ಕಿಶನ್ (27 ರನ್) ಹಾಗೂ ತಿಲಕ್ ವರ್ಮಾ ರನ್ ಗತಿಗೆ ವೇಗ ನೀಡಲು ಯತ್ನಿಸಿದರು. ಈ ವೇಳೆ, 27 ರನ್ ಬಾರಿಸಿದ್ದ ಕಿಶನ್ ಶೆಫರ್ಡ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ತದನಂತರ ಕ್ರೀಸ್ಗಿಳಿದ ಸಂಜು ಸ್ಯಾಮ್ಸನ್ (7 ರನ್) ಮತ್ತೊಮ್ಮೆ ಸಿಕ್ಕ ಅವಕಾಶ ಕೈಚೆಲ್ಲಿದರು. ಇನ್ನೊಂದೆಡೆ ಉತ್ತಮ ಇನ್ನಿಂಗ್ಸ್ ಕಟ್ಟಿದ ತಿಲಕ್ ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ (51 ರನ್) ದಾಖಲಿಸಿದರು. ಆದರೆ, ಅರ್ಧಶತಕ ಬಾರಿಸುತ್ತಿದ್ದಂತೆ ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟಾದರು.
ಬಳಿಕ ಸಮಯೋಚಿತ ಆಟವಾಡುತ್ತಿದ್ದ ಹಾರ್ದಿಕ್ ಪಾಂಡ್ಯ (24 ರನ್) ಶೆಫರ್ಡ್ ಎಸೆದ ಮಾರಕ ಯಾರ್ಕರ್ಗೆ ಬೌಲ್ಡ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಆಲ್ರೌಂಡರ್ ಅಕ್ಷರ್ ಪಟೇಲ್ 14 ರನ್ ಬಾರಿಸಿ ಔಟಾದರು. ಕೊನೆಯಲ್ಲಿ ರವಿ ಬಿಷ್ಣೋಯ್ 8 ಹಾಗೂ ಅರ್ಷದೀಪ್ 6 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. 20 ಓವರ್ಗಳಲ್ಲಿ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು.
ಪೂರನ್ ಅಬ್ಬರದ ಬ್ಯಾಟಿಂಗ್:153 ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್‌ಗೆ ಭಾರತದ ಬೌಲರ್ಗಳು ಆರಂಭದಲ್ಲೇ ಆಘಾತ ನೀಡಿದ್ದರು. 32 ರನ್ ಆಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ನಾಯಕ ಹಾರ್ದಿಕ್ ಮೊದಲ ಎಸೆತದಲ್ಲೇ ಬ್ರೆಂಡನ್ ಕಿಂಗ್ (0) ಅವರನ್ನು ಪೆವಿಲಿಯನ್ಗೆ ಅಟ್ಟಿದರು. ಬಳಿಕ ಜಾಸನ್ ಚಾರ್ಲಸ್ (2) ಹಾಗೂ ಕೈಲ್ ಮೇಯರ್ಸ್ (15) ವಿಕೆಟ್ ಕಬಳಿಸದ ಭಾರತ ತಂಡ ಕೆರಿಬಿಯನ್ನರ ಮೇಲೆ ಒತ್ತಡ ಹೇರಿತ್ತು. ಆದರೆ, ಈ ವೇಳೆ ಕ್ರೀಸ್ನಲ್ಲಿದ್ದ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಅಬ್ಬರದ ಬ್ಯಾಟಿಂಗ್ ಮೂಲಕ ಪಂದ್ಯವನ್ನು ವಿಂಡೀಸ್ನತ್ತ ವಾಲುವಂತೆ ಮಾಡಿದರು. ಭರ್ಜರಿ ಅರ್ಧಶತಕ ಸಿಡಿಸಿದ ಪೂರನ್ 40 ಎಸೆತಗಳಲ್ಲಿ 67 ರನ್ ದಾಖಲಿಸಿದರು. ಇವರಿಗೆ ನಾಯಕ ಪೊವೆಲ್ (21) ಹಾಗೂ ಶಿಮ್ರಾನ್ ಹೆಟ್ಮೇರ್ (22) ಉತ್ತಮ ಸಾಥ್ ನೀಡಿದರು.
ವಿಂಡೀಸ್ ದಿಢೀರ್ ಕುಸಿತ:4 ವಿಕೆಟ್ಗೆ 126 ರನ್ ಗಳಿಸಿದ್ದ ವಿಂಡೀಸ್ ನಿಕೋಲಸ್ ಪೂರನ್ ಔಟಾಗುತ್ತಿದ್ದಂತೆ ದಿಢೀರ್ ಕುಸಿತ ಕಂಡಿತು. ಶೇಫರ್ಡ್ ಹಾಗೂ ಹೋಲ್ಡರ್ನ್ನು ಶೂನ್ಯಕ್ಕೆ ಔಟಾದರೆ, ಹೆಟ್ಮೇರ್ ಅವರನ್ನು ಕೂಡ ಚಹಲ್ ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದ್ದರಿಂದ 129 ರನ್ ಆಗುವಷ್ಟರಲ್ಲಿ 8 ವಿಕೆಟ್ ಉರುಳಿದ್ದವು. ಆದರೆ, ಬಳಿಕ ಅಕೀಲ್ ಹೊಸೇನ್ (16) ಹಾಗೂ ಜೋಸೆಫ್ (10) ಅಜೇಯ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. 18.5 ಓವರ್ಗಳಲ್ಲಿ ಗೆಲುವಿನ ನಗೆ ಬೀರಿದ ವಿಂಡೀಸ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಮೂರನೇ ಪಂದ್ಯವೂ ಗಯಾನಾದಲ್ಲೇ ನಾಳೆ (ಮಂಗಳವಾರ) ನಡೆಯಲಿದ್ದು, ಸರಣಿ ಜೀವಂತವಾಗಿರಲು ಭಾರತವು ಗೆಲ್ಲಲೇಬೇಕಿದೆ.
ಇದನ್ನೂ ಓದಿ:IND vs WI, 2nd T20: ಭಾರತಕ್ಕೆ ತಿಲಕ್ ವರ್ಮಾ ಆಸರೆ; ವೆಸ್ಟ್ ಇಂಡೀಸ್‌ಗೆ 153 ರನ್ ಗುರಿ