ಮುಂಬೈ: ವೆಸ್ಟ್ ಇಂಡೀಸ್ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವೆಸ್ಟ್ ಇಂಡೀಸ್‌ನ ಸೀಮಿತ ಓವರ್‌ಗಳ ನಾಯಕರಾಗಿದ್ದ ಪೊಲಾರ್ಡ್ ಒಟ್ಟು 123 ಏಕದಿನ ಮತ್ತು 101 T20I ಪಂದ್ಯಗಳನ್ನಾಡಿದ್ದಾರೆ.
15 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದ ಪೊಲಾರ್ಡ್ 2019ರಿಂದ ಏಕದಿನ ಮತ್ತು ಟಿ20 ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದರು. ಜೊತೆಗೆ ಕಳೆದ ವರ್ಷದ ಟಿ20 ವಿಶ್ವಕಪ್ನಲ್ಲಿ ತಂಡವನ್ನ ಮುನ್ನಡೆಸಿದ್ದರು. ವೆಸ್ಟ್ ಇಂಡೀಸ್ ಪರ 123 ಏಕದಿನ ಪಂದ್ಯಗಳಿಂದ 2706ರನ್ಗಳಿಸಿ, 55 ವಿಕೆಟ್ ಪಡೆದುಕೊಂಡಿರುವ ಪೊಲಾರ್ಡ್ 101 ಟಿ20 ಪಂದ್ಯಗಳಿಂದ 1568ರನ್ ಹಾಗೂ 44 ವಿಕೆಟ್ ಕಬಳಿಸಿದ್ದಾರೆ.
ಏಕದಿನ, ಟಿ20 ತಂಡದ ಕ್ಯಾಪ್ಟನ್ ಆಗಿದ್ದ ಪೊಲಾರ್ಡ್
2012ರಲ್ಲಿ ವೆಸ್ಟ್ ಇಂಡೀಸ್ ಐಸಿಸಿ ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಇವರು, 2016ರಲ್ಲಿ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದರು. ಈ ವೇಳೆ ಕೂಡ ತಂಡ ಚಾಂಪಿಯನ್ ಆಗಿತ್ತು. 34 ವರ್ಷದ ಪೊಲಾರ್ಡ್ 2007ರಲ್ಲಿ ತಮ್ಮ ಮೊದಲ ಏಕದಿನ ಪಂದ್ಯವನ್ನಾಡಿದ್ದು, ಅನೇಕ ವರ್ಷಗಳ ಕಾಲ ತಂಡದ ಖಾಯಂ ಸದಸ್ಯರಾಗಿ ಕ್ರಿಕೆಟ್ ಆಡಿದ್ದಾರೆ.
ಕಳೆದ ಅನೇಕ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದ ಪೊಲಾರ್ಡ್, ಸದ್ಯ ಅದೇ ತಂಡದ ಭಾಗವಾಗಿದ್ದಾರೆ. ಈ ಸಲ ನಡೆದ ಮೆಗಾ ಹರಾಜಿಗೂ ಮೊದಲು ತಂಡದಲ್ಲಿ ರಿಟೈನ್ ಮಾಡಿಕೊಳ್ಳಲಾಗಿತ್ತು.
ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ಪೊಲಾರ್ಡ್ ನಿವೃತ್ತಿ
ಇನ್ಸ್ಟಾಗ್ರಾಮ್ನಲ್ಲಿ ಹೇಳಿದ್ದೇನು?:ನಮಸ್ಕಾರ. ಬಹಳಷ್ಟು ಚರ್ಚೆ ನಡೆಸಿದ ಬಳಿಕ ನಾನು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. 10 ವರ್ಷದ ಬಾಲಕನಾಗಿದ್ದಾಗಿನಿಂದ ವೆಸ್ಟ್ ಇಂಡೀಸ್ ಪರ ಆಡುವುದು ನನ್ನ ಕನಸಾಗಿತ್ತು. ಆದರೆ, 15 ವರ್ಷ ಮೇಲ್ಪಟ್ಟ ನಂತರ ತಂಡವನ್ನು ಪ್ರತಿನಿಧಿಸಿರುವುದಕ್ಕೆ ನನಗೆ ಹೆಮ್ಮೆಯಾಗಿದೆ. ಇದೀಗ ನಿವೃತ್ತಿ ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.