ವೆಲ್ಲಿಂಗ್ಟನ್:ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದ ನಿಂತು ಹೋಗಿದೆ. ಸತತ ಮಳೆ ಸುರಿದಿದ್ದರಿಂದ ಟಾಸ್ ಕೂಡಾ ನಡೆಯಲಿಲ್ಲ. ಹೀಗಾಗಿ ಉಭಯ ತಂಡಗಳ ನಾಯಕರು ಪರಸ್ಪರ ಹಸ್ತಲಾಘವ ಮಾಡಿ ತಮ್ಮ ಹೊಟೇಲ್‌ನತ್ತ ತೆರಳಿದರು.
ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಇದಾಗಿತ್ತು. ಆದರೆ, ಎಡೆಬಿಡದೆ ಮಳೆ ಸುರಿದು ಮೈದಾನದಲ್ಲಿ ಹೆಜ್ಜೆ ಇಡಲೂ ಸಾಧ್ಯವಾಗಲಿಲ್ಲ. ಬಳಿಕ ಒಂದೂ ಎಸೆತವಿಲ್ಲದೆ ಪಂದ್ಯವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು.
ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ ನಾಯಕತ್ವ ವಹಿಸಿಕೊಂಡಿದ್ದರು. ಮಳೆಯಿಂದ ಪಂದ್ಯ ನಡೆಯದ ಕಾರಣ ಅಭಿಮಾನಿಗಳು ನಿರಾಶೆ ವ್ಯಕ್ತಪಡಿಸಿದರು. ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ಇನ್ನೆರಡು ಪಂದ್ಯಗಳನ್ನು ಆಡಲಿದೆ. ನಂತರ ಉಭಯ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ನಿಗದಿಯಾಗಿವೆ.
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಎರಡೂ ತಂಡಗಳು ಸೆಮಿಫೈನಲ್ ಹಂತ ತಲುಪಿದ್ದವು. ಭಾರತ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸೋತರೆ, ನ್ಯೂಜಿಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿತ್ತು.
ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಪ್ರೀಮಿಯರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಂಡ ಮುನ್ನಡೆಸುತ್ತಿದ್ದು, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಉಪನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಕೆಎಲ್ ರಾಹುಲ್ ಅವರಿಗೂ ವಿಶ್ರಾಂತಿ ನೀಡಲಾಗಿದೆ.
ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿರುವ ಕಾರಣ ಶುಭಮನ್ ಗಿಲ್, ಉಮ್ರಾನ್ ಮಲಿಕ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿದೆ. ಟಿ20 ವಿಶ್ವಕಪ್ ಬಳಿಕ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಇಡೀ ಕೋಚಿಂಗ್ ಸಿಬ್ಬಂದಿಗೆ ರೆಸ್ಟ್ ಕೊಡಲಾಗಿದೆ. ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಈ ಪ್ರವಾಸಕ್ಕೆ ಭಾರತೀಯ ಕೋಚ್ ಆಗಿ ನೇಮಿಸಲಾಗಿದೆ. ಮುಂದಿನ ಟಿ20 ಭಾನುವಾರ ಮೌಂಟ್ ಮೌಂಗನುಯಿಯಲ್ಲಿ ನಡೆಯಲಿದೆ.
ಇದನ್ನೂ ಓದಿ:ಕ್ರೀಡೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿ: ಜೋಶ್ನಾ ಚಿನ್ನಪ್ಪ