ನವದೆಹಲಿ:ನಾಯಕತ್ವ ತ್ಯಜಿಸಿರುವ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಒತ್ತಡರಹಿತರಾಗಿ ಕಾಣುತ್ತಿದ್ದಾರೆ. ಇದು ಮುಂಬರುವ ಐಪಿಎಲ್ನಲ್ಲಿ ಎದುರಾಳಿ ತಂಡಗಳಿಗೆ ಅಪಾಯಕಾರಿಯಾಗುವ ಸಂಕೇತ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಐಪಿಎಲ್ ಆವೃತ್ತಿ ಮುಗಿಯುತ್ತಿದ್ದಂತೆ ವಿರಾಟ್ ಕೊಹ್ಲಿ ಆರ್ಸಿಬಿ ನಾಯಕತ್ವ ತ್ಯಜಿಸಿದ್ದರು. ನಂತರ ಟಿ20 ನಾಯಕತ್ವದಿಂದ ತಾವಾಗಿಯೇ ಕೆಳಗಿಳಿದರೆ, ಏಕದಿನ ಕ್ಯಾಪ್ಟನ್ಸಿಯಿಂದ ಬಿಸಿಸಿಐ ತೆಗೆದು ಹಾಕಿತ್ತು. ಇದರ ಬೆನ್ನಲ್ಲೆ ಜನವರಿಯಲ್ಲಿ ಟೆಸ್ಟ್ ನಾಯಕತ್ವದಿಂದಲೂ ಹೊರಬಂದರು.
"ನಾಯಕತ್ವವನ್ನು ಹಸ್ತಾಂತರಿಸಿದ್ದೇನೆ ಎಂಬುದು ಕೊಹ್ಲಿಗೆ ತಿಳಿದಿದೆ, ಅದು ಅವರಿಗೆ ದೊಡ್ಡ ಹೊರೆಯಾಗಿತ್ತು ಎಂದು ನಾನು ಭಾವಿಸುತ್ತೇನೆ. ಅಲ್ಲದೆ ಸ್ವಲ್ಪ ಸಮಯದವರೆಗೆ ಅವರ ಪ್ರದರ್ಶನ ಮಟ್ಟ ಕುಸಿಯಲು ಕೂಡಾ ಕಾರಣವಾಗಿತ್ತು. ಈಗ ಅವರು ನಾಯಕತ್ವ ತ್ಯಜಿಸಿ ಒತ್ತಡ ಮುಕ್ತರಾಗಿದ್ದಾರೆ. ಇದು ವಿರೋಧಿ ಬಳಗಕ್ಕೆ ಅಪಾಯಕಾರಿ ಮುನ್ಸೂಚನೆಯಾಗಿದೆ" ಎಂದು ಮ್ಯಾಕ್ಸ್‌ವೆಲ್ RCB ಪಾಡ್ಕಾಸ್ಟ್ನಲ್ಲಿ ತಿಳಿಸಿದ್ದಾರೆ.