ನವದೆಹಲಿ:ಶ್ರೀಲಂಕಾ- ಪಾಕಿಸ್ತಾನದ ಆತಿಥ್ಯದಲ್ಲಿ ಸದ್ಯ ಏಷ್ಯಾಕಪ್ ಕ್ರಿಕೆಟ್ ನಡೆಯುತ್ತಿದೆ. ಮುಂದಿನ ತಿಂಗಳು ಏಕದಿನ ಕ್ರಿಕೆಟ್ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಈ ನಡುವೆ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಗೆ ಸಂಬಂಧಿಸಿದಂತೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪ್ರತಿಕ್ರಿಯಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಠಾಕೂರ್, ಪಾಕಿಸ್ತಾನವು ಭಯೋತ್ಪಾದನೆ ಮತ್ತು ಗಡಿಯಾಚೆಗಿನ ಅಕ್ರಮ ನುಸುಳುವಿಕೆಯನ್ನು ನಿಲ್ಲಿಸುವವರೆಗೂ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಯುವುದಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಹಿಂದೆಯೇ ನಿರ್ಧರಿಸಿತ್ತು. ಇದು ದೇಶದ ಭಾವನೆ ಮತ್ತು ದೇಶದ ಜನರ ಹಿತಾಸಕ್ತಿ ಎಂದು ನಾನು ಭಾವಿಸುತ್ತೇನೆ. ಹಾಗಾಗಿ, ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯವನ್ನು ನಾವು ಆಡುವುದಿಲ್ಲ ಎಂದರು.
ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ರಾಷ್ಟ್ರೀಯ ರೈಫಲ್ಸ್‌ನ ಕ್ಯೂಆರ್‌ಟಿಗೆ ಕಮಾಂಡರ್ ಹಾಗು ಕರ್ನಲ್ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೋಕರ್ನಾಗ್ ಪ್ರದೇಶದಲ್ಲಿ ಶತ್ರುಗಳ ಗುಂಡಿನ ದಾಳಿಯಲ್ಲಿ ಮೇಜರ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಉಪ ಅಧೀಕ್ಷಕ ಕೂಡ ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧರನ್ನು ಹಿರಿಯ ಸೇನಾಧಿಕಾರಿಗಳು ಮತ್ತು ಡಿಎಸ್ಪಿ ಕರ್ನಲ್ ಮನ್ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನಕ್ ಮತ್ತು ಹುಮಾಯೂನ್ ಭಟ್ ಎಂದು ಗುರುತಿಸಲಾಗಿದೆ.
ಪಾಕಿಸ್ತಾನವು ಕ್ರಿಕೆಟ್ ಸಂಬಂಧವನ್ನು ಮರುಸ್ಥಾಪಿಸಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಭಾರತ ಕಟ್ಟುನಿಟ್ಟಾದ ನಿಲುವು ತೆಗೆದುಕೊಂಡಿದೆ. ಭಯೋತ್ಪಾದನೆಯನ್ನು ನಿಯಂತ್ರಿಸುವವರೆಗೂ ಕ್ರಿಕೆಟ್ ಸಂಬಂಧಗಳನ್ನು ಪುನರಾರಂಭಿಸುವುದಿಲ್ಲ ಎಂದು ಠಾಕೂರು ಖಡಕ್ ಸಂದೇಶ ರವಾನಿಸಿದ್ದಾರೆ.
ಭಾರತ-ಪಾಕಿಸ್ತಾನವು 2012ರಿಂದ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳನ್ನು ಆಡಿಲ್ಲ. ಆ ಸರಣಿಯ ನಂತರ ನೆರೆಹೊರೆ ದೇಶಗಳ ನಡುವೆ ಹೆಚ್ಚಿದ ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧಗಳನ್ನು ಸ್ಥಗಿತಗೊಳಿಸಲಾಗಿದೆ. ಈ ತಿಂಗಳಾರಂಭದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಇತರ ಕ್ರಿಕೆಟ್ ಮಂಡಳಿಗಳ ಸದಸ್ಯರನ್ನು ಲಾಹೋರ್‌ನಲ್ಲಿ ಏಷ್ಯಾ ಕಪ್ ಪಂದ್ಯಗಳಿಗೆ ಹಾಜರಾಗಲು ಆಹ್ವಾನಿಸಿದ ನಂತರ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ನಡೆದ ಭೋಜನಕೂಟದಲ್ಲಿ ಅವರು ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳ ಆಟಗಾರರನ್ನು ಭೇಟಿಯಾಗಿದ್ದರು.