ಮುಂಬೈ: ಭಾರತದ ಮಹಿಳಾ ಕ್ರಿಕೆಟ್ ನಾಯಕಿ ಮಿಥಾಲಿ ರಾಜ್ ಬಗೆಗಿನ ಊಹಾಪೋಹಗಳಿಗೆ ಮುಖ್ಯ ಕೋಚ್ ರಮೇಶ್ ಪೊವಾರ್ ತೆರೆ ಎಳೆದಿದ್ದಾರೆ. ನಾವು ಮಿಥಾಲಿಯವರೊಂದಿಗೆ ಮಾತುಕತೆ ನಡೆಸಿದ್ದೇವೆ. ಎಲ್ಲಾ ಬಗೆಹರಿದ ಮೇಲೆಯೇ ನಾನು ಮಹಿಳಾ ಕ್ರಿಕೆಟ್ ಕೋಚ್ ಆಗಿ ನೇಮಕಗೊಂಡಿದ್ದೇನೆ ಎಂದು ಪೊವಾರ್ ಪ್ರತಿಕ್ರಿಯಿಸಿದ್ದಾರೆ.
ಸದ್ಯ ನಮ್ಮ ಮುಂದೆ ದೊಡ್ಡ ಗುರಿ, ಜವಾಬ್ದಾರಿ ಮತ್ತು ಅವಕಾಶಗಳಿವೆ. ಭಾರತಕ್ಕಾಗಿ ಮಹಿಳಾ ಟೆಸ್ಟ್ ಕ್ರಿಕೆಟ್ ಪುನಾರಂಭಗೊಂಡಿದೆ. ತಂಡದ ಪ್ರತಿಯೊಬ್ಬರೂ ತಮ್ಮ ಪ್ರತಿಭೆ ಹೊರಹಾಕಲು ಇದೊಂದು ಉತ್ತಮ ಅವಕಾಶವಾಗಿದೆ. ಮಿಥಾಲಿಯವರು ಇಡೀ ತಂಡವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ. ಇದಕ್ಕೆ ಬಿಸಿಸಿಐ ಕೂಡ ಬೆಂಬಲ ನೀಡುತ್ತಿದೆ ಎಂದರು.