ಅಬುಧಾಬಿ :ಟಿ20 ವಿಶ್ವಕಪ್ನ ಸೂಪರ್ 12ನಲ್ಲಿ ಪಾಕಿಸ್ತಾನ ವಿರುದ್ಧದ ಸೋಲು ತಮ್ಮನ್ನು ಮತ್ತು ತಮ್ಮ ತಂಡವನ್ನು ತುಂಬಾ ಆಳವಾಗಿ ಗಾಸಿಗೊಳಿಸಿದ ಕಾರಣ ನಾನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯಾಗುತ್ತಿದ್ದೇನೆ ಎಂದು ಆಫ್ಘಾನಿಸ್ತಾನ ಮಾಜಿ ನಾಯಕ ಅಸ್ಗರ್ ಆಫ್ಘಾನ್ ತಮ್ಮ 17 ವರ್ಷದ ವೃತ್ತಿ ಬದುಕಿಗೆ ವಿದಾಯ ಘೋಷಿಸುವ ಮುನ್ನ ಹೇಳಿದ್ದಾರೆ.
ಆಫ್ಘಾನಿಸ್ತಾನ ಶುಕ್ರವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 5 ವಿಕೆಟ್ಗಳ ಸೋಲು ಕಂಡಿತ್ತು. 12 ಎಸೆತಗಳಲ್ಲಿ 24 ರನ್ಗಳ ಅಗತ್ಯವಿದ್ದಾಗ ಆಸಿಫ್ ಅಲಿ ಒಂದೇ ಓವರ್ನಲ್ಲಿ 4 ಸಿಕ್ಸರ್ ಸಿಡಿಸಿ ಆಫ್ಘಾನ್ ಸೋಲಿಗೆ ಕಾರಣರಾಗಿದ್ದರು. ಈ ಸೋಲು ನಿಜಕ್ಕೂ ಆಫ್ಘಾನಿಸ್ತಾನಕ್ಕೆ ಆಘಾತ ತಂದಿತ್ತು. ಅಸ್ಗರ್ ಅವರ ಸಹೋದರ ಕರೀಮ್ ಜನತ್ 19ನೇ ಓವರ್ ಬೌಲಿಂಗ್ ಮಾಡಿದ್ದರು.
ಪಂದ್ಯ ಮುಗಿದ 24 ಗಂಟೆಗಳ ನಂತರ ಆಫ್ಘಾನ್ ಮಾಜಿ ನಾಯಕ ತಾವೂ ನಮೀಬಿಯಾ ವಿರುದ್ಧದ ಪಂದ್ಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯಾಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ದಿಢೀರ್ ಘೋಷಣೆ ಮಾಡಿದ್ದರು.