ಕೊಲಂಬೊ (ಶ್ರೀಲಂಕಾ):ಮುಂಬರುವ ಏಕದಿನ ಕ್ರಿಕೆಟ್ವಿಶ್ವಕಪ್ ತಂಡದಲ್ಲಿ ಕೆ.ಎಲ್.ರಾಹುಲ್ ಹೆಸರು ನೋಡಿದವರಲ್ಲಿ ಹಲವರು ಇದು ಸರಿಯಾದ ಆಯ್ಕೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಏಕೆಂದರೆ ಅವರು ಗಾಯಕ್ಕೆ ತುತ್ತಾಗಿ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಗಾಯದ ನಂತರ ಅವರ ಫಾರ್ಮ್ ಬಗ್ಗೆ ಸಂಶಯ ವ್ಯಕ್ತಪಡಿಸಲಾಗುತ್ತಿತ್ತು. ಆದ್ರೆ, ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ.
ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಪಂದ್ಯಾವಳಿಯ ಮೊದಲೆರಡು ಪಂದ್ಯಗಳಿಂದ ರಾಹುಲ್ ಹೊರಗುಳಿದಿದ್ದರು. ವಿಶ್ವಕಪ್‌ಗೆ ಕೆಲವೇ ತಿಂಗಳು ಬಾಕಿ ಇರುವಾಗ ಈ ಆಟಗಾರನನ್ನು ಆಡಿಸುವ ಅಗತ್ಯವಿತ್ತೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಆದರೆ ಪಾಕ್ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಸೂಪರ್ ಇನ್ನಿಂಗ್ಸ್ ಕಟ್ಟಿದ ರಾಹುಲ್ ಎಲ್ಲ ಪ್ರಶ್ನೆಗಳಿಗೂ ತಕ್ಕ ಉತ್ತರ ನೀಡಿದರು.
ತನ್ನ ಫಾರ್ಮ್ ಮತ್ತು ಫಿಟ್ನೆಸ್ ಬಗ್ಗೆ ಯಾವುದೇ ಅನುಮಾನಪಡುವ ಅಗತ್ಯವಿಲ್ಲ ಎಂಬುದನ್ನು ಅದ್ಭುತ ಬ್ಯಾಟಿಂಗ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಬಲಿಷ್ಠ ಪಾಕ್ ಬೌಲರ್‌ಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ದಂಡಿಸಿದ ರಾಹುಲ್ ದೀರ್ಘಕಾಲ ಬ್ಯಾಟಿಂಗ್ ಮಾಡಿದ್ದು ಮಾತ್ರವಲ್ಲದೆ, ಅತ್ಯುತ್ತಮ ಸ್ಟ್ರೋಕ್‌ಗಳಿಂದ ಕ್ರಿಕೆಟ್ ಲೋಕದ ಗಮನ ಸೆಳೆದರು. ಇದೇ ವೇಳೆ, ತಂಡದಲ್ಲಿ ಆಟಗಾರರ ಸಂಯೋಜನೆ ಮತ್ತು ಮಧ್ಯಮ ಕ್ರಮಾಂಕದ ಸಮಸ್ಯೆಗಳನ್ನೂ ಪರಿಹರಿಸಿದರು.