ಮುಂಬೈ:ಪ್ರಥಮ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ತಟಸ್ಥ ಸ್ಥಳದಲ್ಲಿ ಆಯೋಜನೆಗೊಂಡಿರುವುದು ಎರಡೂ ತಂಡಕ್ಕೆ ಸಮಾನ ಅನುಕೂಲ ಕಲ್ಪಿಸಲಿದೆ. ಕಿವೀಸ್ ಬೌಲರ್ಗಳಿಂದ ಎಂತಹ ಸವಾಲನ್ನೂ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಹೇಳಿದ್ದಾರೆ.
ಜೂನ್ 18ರಿಂದ 22ರವರೆಗೆ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೌತಾಂಪ್ಟನ್ನ ಏಜಿಯಸ್ ಬೌಲ್ನಲ್ಲಿ ನಡೆಯಲಿದೆ. ವೇಗಿಗಳಿಗೆ ನೆರವು ನೀಡುವ ಪಿಚ್ನಲ್ಲಿ ಭಾರತ ತಂಡಕ್ಕಿಂತ ನ್ಯೂಜಿಲ್ಯಾಂಡ್ ತಂಡ ಈ ಪಂದ್ಯದಲ್ಲಿ ಮೇಲುಗೈ ಸಾಧಿಸಲಿದೆ ಎಂದು ಕೆಲವು ತಜ್ಞರು ಹೇಳುತ್ತಿದ್ದಾರೆ. ಆದರೆ ಪೂಜಾರ ಮಾತ್ರ ತಟಸ್ಥ ಸ್ಥಳ ಇಬ್ಬರಿಗೂ ಸಮಾನ ಅವಕಾಶ ಕಲ್ಪಿಸಲಿದೆ ಎಂದಿದ್ದಾರೆ.
"ಅವರ(ನ್ಯೂಜಿಲ್ಯಾಂಡ್) ಬೌಲಿಂಗ್ ದಾಳಿ ತುಂಬಾ ಸಮತೋಲಿತವಾಗಿದೆ. ನಾವು ಅವರ ಬೌಲರ್‌ಗಳನ್ನು ಈ ಮೊದಲು ಎದುರಿಸಿದ್ದೇವೆ ಮತ್ತು ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ, ಅವರು ಬಳಸುವ ಆ್ಯಂಗಲ್ಗಳ ಬಗ್ಗೆ ಸರಿಯಾದ ಕಲ್ಪನೆಗಳನ್ನು ಹೊಂದಿದ್ದೇವೆ ಮತ್ತು ಅದಕ್ಕೆ ನಾವು ಸಿದ್ಧರಾಗುತ್ತೇವೆ" ಎಂದು ಪೂಜಾರ ಪ್ರಮುಖ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.