ಲಂಡನ್:2011 ರ ಏಕದಿನ ವಿಶ್ವಕಪ್ ಬಳಿಕ ಭಾರತ ತಂಡ ಯಾವುದೇ ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ. ಕಳೆದ ಬಾರಿಯ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಟ್ರೋಫಿಯಲ್ಲಿ ಸೋಲು ಕಂಡಿದ್ದೆವು. ಅದು ಈ ಬಾರಿ ಸುಳ್ಳಾಗಿ ಪ್ರಶಸ್ತಿ ಬರ ನೀಗಲಿದೆ ಎಂದು ಭಾರತ ತಂಡದ ಪ್ರಧಾನ ತರಬೇತುದಾರ ರಾಹುಲ್ ದ್ರಾವಿಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾಳೆಯಿಂದ (ಜೂನ್ 7 ರಿಂದ 11) ಆರಂಭವಾಗುವ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಅವರು, ಭಾರತ ತಂಡದ ಶಕ್ತಿ ಸಾಮರ್ಥ್ಯ ಮತ್ತು ಟ್ರೋಫಿ ಗೆಲುವಿನ ಬಗ್ಗೆ ಮಾತನಾಡಿದ್ದಾರೆ. ನಾವು ಕಳೆದ 12 ವರ್ಷಗಳಲ್ಲಿ ಐಸಿಸಿ ಪ್ರಶಸ್ತಿಯನ್ನು ಗೆದ್ದಿಲ್ಲದಿರಬಹುದು. ಆದರೆ, ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆಲ್ಲಲೇಬೇಕೆಂಬ ಒತ್ತಡದಲ್ಲಿ ನಾವಿಲ್ಲ. ಟ್ರೋಫಿ ಗೆಲ್ಲುವ ಸಲುವಾಗಿ ಎಲ್ಲ ಯೋಜನೆ, ತಂತ್ರಗಳನ್ನು ರೂಪಿಸಲಾಗಿದೆ. ಅದು ಈ ಬಾರಿ ಸಾಕಾರವಾಗಲಿದೆ ಎಂದು ಹೇಳಿದರು.
2021 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನಾವು ಸೋತೆವು. ಟಿ20 ವಿಶ್ವಪ್ನ ನಾಕ್‌ಔಟ್ ಹಂತದಲ್ಲೇ ಎಡವಿದೆವು. ಇವೆಲ್ಲವೂ ನಮ್ಮ ಮೇಲೆ ಪ್ರಶಸ್ತಿ ಜಯಿಸುವ ಒತ್ತಡ ಹೆಚ್ಚಿಸಿದೆ ಎಂದು ಅನಿಸುವುದು ಸಹಜ. ಆದರೆ, ತಂಡ ಅಂತಹ ಯಾವುದೇ ಒತ್ತಡಕ್ಕೆ ಸಿಲುಕಿಲ್ಲ. ಗೆಲುವೊಂದೇ ನಮ್ಮ ಗುರಿಯಾಗಿದೆ. ಕಳೆದ ಎರಡು ವರ್ಷಗಳ ಸತತ ಶ್ರಮಕ್ಕೆ ಕೂಲಿ ಸಿಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಆಸ್ಟ್ರೇಲಿಯಾ ವಿರುದ್ಧ ಪಂದ್ಯ, ಸರಣಿ ಗೆಲ್ಲುವುದು ಎಂದಿಗೂ ಥ್ರಿಲ್ಲಿಂಗ್. ಕಾರಣ ಆ ತಂಡ ಕೂಡ ಬಲಿಷ್ಠವಾಗಿದ್ದು, ಕಳೆದ 6 ವರ್ಷಗಳಿಂದ ತನ್ನ ಸಾಮರ್ಥ್ಯ ಸಾಬೀತು ಮಾಡಿದೆ. ಇಂಗ್ಲೆಂಡ್ನಲ್ಲಿ ಆಸೀಸ್ ಎದುರಾಗುತ್ತಿದ್ದುದು ನಿರೀಕ್ಷೆ ಹೆಚ್ಚಿದೆ. ಪ್ರಶಸ್ತಿ ಜಯಿಸುವ ಮೂಲಕ ಶ್ರಮಕ್ಕೆ ಅರ್ಥ ಕಂಡುಕೊಳ್ಳಲಿದ್ದೇವೆ ಎಂದು ಹೇಳಿದರು.