ದುಬೈ: ಇದೇ ಮೊದಲ ಬಾರಿಗೆ ವಿಶ್ವಕಪ್ಗೆ ಅರ್ಹತೆ ಪಡೆದಿದ್ದ ನಮೀಬಿಯಾ ತಂಡ ಶುಕ್ರವಾರ ನಡೆದ ಐರ್ಲೆಂಡ್ ವಿರುದ್ಧದ ಕೊನೆಯ ಸೂಪರ್ ಲೀಗ್ ಪಂದ್ಯದಲ್ಲಿ 8 ವಿಕೆಟ್ಗಳ ಜಯ ಸಾಧಿಸಿ ಸೂಪರ್ 12ಗೆ ಪ್ರವೇಶ ಪಡೆದಿದೆ.
2019ರಲ್ಲಿ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ನಮೀಬಿಯಾ ತಮ್ಮ ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ತಮಗಿಂತ ಅನುಭವಿಗಳಾದ ನೆದರ್ಲೆಂಡ್ಸ್ ಮತ್ತು ಐರ್ಲೆಂಡ್ ತಂಡಗಳನ್ನ ಮಣಿಸಿ ಸೂಪರ್ 12ಗೆ ಪ್ರವೇಶ ಪಡೆದಿದೆ. ಈ ಕುರಿತು ಮಾತನಾಡಿರುವ ಕೋಚ್ ಪಿಯರ್ ಡಿ ಬ್ರೈನ್, ತಾವು ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ತಂಡಗಳ ಜೊತೆ ಇದುವರೆಗೆ ಆಡಿಲ್ಲ. ಆದರೆ ವಿಶ್ವಕಪ್ನಲ್ಲಿ ಸ್ಪರ್ಧಾತ್ಮಕ ಪೈಪೋಟಿ ನೀಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೋಡಿ, ನಮ್ಮ ಪಾಲಿಗೆ ಈ ಸಂಭ್ರಮದ ಕ್ಷಣವನ್ನು ಆನಂದಿಸುವ ಸಮಯ. ಆದರೆ ನಾವು ಇಲ್ಲಿಗೆ ಖಂಡಿತ ಸೋಲೊಪ್ಪಿಕೊಳ್ಳುವುದಕ್ಕೆ ಬಂದಿಲ್ಲ. ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ಅಂತಹ ದೊಡ್ಡ ತಂಡಗಳ ಜೊತೆಗೆ ಅಡುವುದು ನಮ್ಮ ಆಟಗಾರರಿಗೆ ಅತ್ಯುತ್ತಮ ಅನುಭವವಾಗಲಿದೆ. ಆದರೆ ನಾವು ಎಲ್ಲೇ ಆಡಿದರೂ ಸ್ಪರ್ಧಾತ್ಮಕವಾಗಿ ಆಡುತ್ತೇವೆ ಎನ್ನುವುದು ನಿಮಗೆ ಗೊತ್ತಿದೆ. ಆದ್ದರಿಂದ ನಾವು ಸ್ಪರ್ಧಿಸಲು ಹೋಗಲಿದ್ದೇವೆ, ಅದರ ಕಡೆಗೆ ಸಂಪೂರ್ಣ ಗಮನ ನೀಡಲಿದ್ದೇವೆ ಎಂದು ಎಂದು ಬ್ರೈನ್ ನಮೀಬಿಯಾ ಸೂಪರ್ 12 ಪ್ರವೇಶಿಸುತ್ತಿದ್ದಂತೆ ಹೇಳಿಕೊಂಡಿದ್ದಾರೆ.