ಮುಂಬೈ:ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡದ ಸಾರಥ್ಯ ವಹಿಸಿಕೊಂಡಿರುವ ಕನ್ನಡಿಗ ಕೆ.ಎಲ್. ರಾಹುಲ್ ಅವರ ನಾಯಕತ್ವ ಭವಿಷ್ಯಕ್ಕೆ ಆಯ್ಕೆಗಾರರು ಇನ್ನಷ್ಟು ನೀರೆರೆಯುತ್ತಿದ್ದಾರೆ ಎಂದು ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಸದ್ಯ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಉಪನಾಯಕತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ರಾಹುಲ್ಗೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಏಕದಿನ ನಾಯಕನ ಪಟ್ಟವನ್ನೂ ನೀಡಲಾಗಿದೆ. ಉಪನಾಯಕತ್ವವು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹೆಗಲಿಗೇರಿದೆ.
ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಚೇತನ್ ಶರ್ಮಾ, ಕೆಎಲ್ ರಾಹುಲ್ ಅವರತ್ತ ಆಯ್ಕೆಗಾರರು ದೃಷ್ಟಿ ನೆಟ್ಟಿದ್ದು, ಅವರು ಮೂರು ಮಾದರಿ ಆಟಗಾರರಾಗಿದ್ದಾರೆ. ನಾಯಕತ್ವದ ಉತ್ತಮ ಅನುಭವ ಹೊಂದಿದ್ದು, ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ರೋಹಿತ್ ಅಲಭ್ಯತೆ ಹಿನ್ನೆಲೆಯಲ್ಲಿ ರಾಹುಲ್ ಮೇಲೆ ನಾವು ವಿಶ್ವಾಸ ಹೊಂದಿದ್ದು, ಅವರ ನಾಯಕತ್ವ ಭವಿಷ್ಯಕ್ಕೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.