ಇಂಗ್ಲೆಂಡ್ ವಿರುದ್ಧ ಮರುನಿಗದಿಯಾದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ಈಗಾಗಲೇ ಕಸರತ್ತು ಶುರು ಮಾಡಿದೆ. ಜುಲೈ 1 ರಿಂದ ನಡೆಯುವ ಪಂದ್ಯವನ್ನು ಗೆದ್ದು ಐತಿಹಾಸಿಕ ಸರಣಿ ಜಯ ಸಾಧಿಸಲು ರೋಹಿತ್ ಶರ್ಮಾ ಬಳಗ ಅಭ್ಯಾಸದಲ್ಲಿ ನಿರತವಾಗಿದೆ. ಪಂದ್ಯದ ಬಗ್ಗೆ ರಣತಂತ್ರ ರೂಪಿಸುವ ಭಾಗವಾಗಿ ಮಾಜಿ ನಾಯಕ ವಿರಾಟ್ ಕೊಹ್ಲಿ ಆಟಗಾರರನ್ನು ಹುರಿದುಂಬಿಸುತ್ತಿರುವ ವಿಡಿಯೋ ಹೊರಬಿದ್ದಿದೆ.
ಲೈಸೆಸ್ಟರ್‌ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಈ ವಿಡಿಯೋವನ್ನು ಟ್ವೀಟ್ ಮಾಡಿದೆ. ಅಭ್ಯಾಸದ ಅವಧಿಯಲ್ಲಿ ವಿರಾಟ್ ಕೊಹ್ಲಿ ಅವರು ತಂಡದ ಸಹ ಆಟಗಾರರೊಂದಿಗೆ ಚರ್ಚಿಸುತ್ತಿದ್ದು, ಆಟಗಾರರನ್ನು ಹುರಿದುಂಬಿಸುತ್ತಿದ್ದಾರೆ. ಕ್ರಿಕೆಟ್ ಕ್ಲಬ್ ಇದನ್ನು 'ವೃತ್ತಿಪರ ತಂಡದ ಉತ್ಸಾಹಭರಿತ ಮಾತುಕತೆ' ಎಂದು ಬಣ್ಣಿಸಿದೆ.
ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ವಿರಾಟ್ ಕೊಹ್ಲಿ ಮುನ್ನಡೆಸಿದ್ದರು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸೋಲುಂಡ ಬಳಿಕ ನಾಯಕತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದರು. ಇದೀಗ ರೋಹಿತ್ ಶರ್ಮಾ ತಂಡದ ಸಾರಥ್ಯ ವಹಿಸಿದ್ದಾರೆ.