ನವದೆಹಲಿ:ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನಿಂದಾಗಿ ದೀರ್ಘಕಾಲದವರೆಗೆ ಕ್ರಿಕೆಟ್‌ನಿಂದ ದೂರವಿದ್ದಾರೆ. ಅವರು ಈ ವರ್ಷ ನ್ಯೂಜಿಲ್ಯಾಂಡ್ಗೆ ಹೋಗಿ ಅಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದರ ನಂತರ, ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಚೇತರಿಸಿಕೊಳ್ಳುತ್ತಿದ್ದಾರೆ. ಬುಮ್ರಾ ಈಗಾಗಲೇ ಸಾಕಷ್ಟು ಚೇತರಿಸಿಕೊಂಡಿರುವಂತೆ ತೋರುತ್ತಿದೆ. ಇನ್ನೂ ಕೆಲವೇ ದಿನಗಳಲ್ಲಿ ಮತ್ತೆ ಟೀಂ ಇಂಡಿಯಾಗೆ ರೀ ಎಂಟ್ರಿ ಕೊಡುವ ಸಾಧ್ಯತೆ ಹೆಚ್ಚಿದೆ.
ನ್ಯೂಜಿಲ್ಯಾಂಡ್ನಲ್ಲಿ ಜಸ್ಪ್ರಿತ್ ಬುಮ್ರಾಗೆ ಸರ್ಜರಿ: ಈ ಕ್ರಮದಲ್ಲಿ ಟೀಂ ಇಂಡಿಯಾಗೆ ಶೀಘ್ರದಲ್ಲೇ ಪುನರಾಗಮನ ಮಾಡುವುದಾಗಿ ಬುಮ್ರಾ ಸುಳಿವು ನೀಡಿದ್ದಾರೆ. ಬುಮ್ರಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಅವರ ಅಭ್ಯಾಸದ ದೃಶ್ಯಗಳಿವೆ. ಈ ಟೀಂ ಇಂಡಿಯಾ ವೇಗಿ ವಿಡಿಯೋಗೆ 'ಕಮಿಂಗ್ ಹೋಮ್' ಎಂದು ಶೀರ್ಷಿಕೆ ನೀಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಿಂದ ಬುಮ್ರಾ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ಆಡಿದ ಅವರು ಎರಡನೇ ಪಂದ್ಯದಲ್ಲಿ ಗಾಯಗೊಂಡಿದ್ದರು. ಅಂದಿನಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಬುಮ್ರಾ ಏಷ್ಯಾಕಪ್, ಟಿ-20 ವಿಶ್ವಕಪ್, ಐಪಿಎಲ್, ಡಬ್ಲ್ಯುಟಿಸಿ ಫೈನಲ್‌ನಲ್ಲಿ ಆಡಿರಲಿಲ್ಲ.
ಅಭ್ಯಾಸದ ಅವಧಿಯಲ್ಲಿ 8-10 ಓವರ್ ಬೌಲಿಂಗ್: ಆದರೆ, ಈ ವರ್ಷಾಂತ್ಯದಲ್ಲಿ ನಡೆಯಲಿರುವ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್‌ಗೆ ಬುಮ್ರಾ ಲಭ್ಯವಾಗುವ ಸಾಧ್ಯತೆಯಿದೆ. ಬುಮ್ರಾ ಅನುಪಸ್ಥಿತಿಯು ಭಾರತ ತಂಡದಲ್ಲಿ ಸರಿಯಾದ ವೇಗಿಗಳ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದರೆ, ಸದ್ಯ ಬುಮ್ರಾ ಸಾಕಷ್ಟು ಚೇತರಿಸಿಕೊಂಡಿದ್ದಾರೆ. ಅವರು ಅಭ್ಯಾಸದ ಅವಧಿಯಲ್ಲಿ 8-10 ಓವರ್ ಬೌಲಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.