ಮುಂಬೈ:ವಿರಾಟ್ ಕೊಹ್ಲಿಗೆ ಟಿ20 ನಾಯಕತ್ವ ತ್ಯಜಿಸುವುದು ಬೇಡ ಎಂದು ನಾನು ವೈಯಕ್ತಿಕವಾಗಿ ಕರೆ ಮಾಡಿ ಮನವಿ ಮಾಡಿದ್ದೆ ಎಂದಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೇಳಿಕೆಯನ್ನು ಕೊಹ್ಲಿ ಅಲ್ಲಗೆಳೆದಿದ್ದು, ನನಗೆ ಯಾರೂ ನಾಯಕತ್ವವನ್ನು ತ್ಯಜಿಸದಂತೆ ಹೇಳಿರಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಟಿ-20 ವಿಶ್ವಕಪ್ ನಂತರ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ, ಏಕದಿನ ಮತ್ತು ಟಿ-20 ತಂಡದ ನಾಯಕತ್ವದಲ್ಲಿ ಮುಂದುವರಿಯುವ ಆಶಯವನ್ನು ಆಯ್ಕೆ ಸಮಿತಿ ಮತ್ತು ಬಿಸಿಸಿಐಗೆ ತಿಳಿಸಿದ್ದರು. ಆದರೆ, ಸೀಮಿತ ಓವರ್ಗಳಿಗೆ ಇಬ್ಬರು ನಾಯಕರು ಅಗತ್ಯವಿಲ್ಲ ಎಂದು ಆಯ್ಕೆ ಸಮಿತಿ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡಕ್ಕೂ ನಾಯಕನನ್ನಾಗಿ ನೇಮಿಸಿತ್ತು.
"ನಾನು ಟಿ20 ನಾಯಕತ್ವ ತ್ಯಜಿಸಲು ನಿರ್ಧರಿಸಿದಾಗ ಮತ್ತು ಬಿಸಿಸಿಐ ಸಂಪರ್ಕಿಸಿ ನನ್ನ ನಿರ್ಧಾರವನ್ನು ತಿಳಿಸಿದ್ದೆ. ಅಂದು ಮಂಡಳಿ ಅದನ್ನು ಚೆನ್ನಾಗಿಯೇ ಸ್ವೀಕರಿಸಿತ್ತು. ಆ ಸಂದರ್ಭದಲ್ಲಿ ನನ್ನ ನಿರ್ಧಾರವನ್ನು ಯಾರೊಬ್ಬರು ಪರಿಶೀಲಿಸಿ ಎಂದು ಹೇಳಲಿಲ್ಲ, ಅದನ್ನು ಸ್ವೀಕರಿಸಿದ ನಂತರ, ನನ್ನ ನಿರ್ಧಾರ ಸರಿಯಾದ ದಿಕ್ಕಿನಲ್ಲಿದೆ ಎಂದಿದ್ದರು.
ಈ ಸಂದರ್ಭದಲ್ಲಿ ನಾನು ಏಕದಿನ ಮತ್ತು ಟೆಸ್ಟ್ ತಂಡದಲ್ಲಿ ನಾಯಕನಾಗಿ ಮುಂದುವರಿಯುವುದಾಗಿ ಹೇಳಿದ್ದೆ. ಇದರಲ್ಲಿ ನನ್ನ ಮಾತು ಸ್ಪಷ್ಟವಾಗಿತ್ತು. ಅದರ ಆಯ್ಕೆಯನ್ನು ಅವರಿಗೆ ಬಿಟ್ಟಿದ್ದೆ. ನಾನು ಏಕದಿನ ಮತ್ತು ಟೆಸ್ಟ್ನಲ್ಲಿ ನಾಯಕನಾಗಿ ಮುಂದುವರಿಯುವ ನಿರ್ಧಾರ ಅವರ ಕೈಯಲ್ಲಿತ್ತು ಎಂದು ಕೊಹ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದೀಗ ನನ್ನ ನಾಯಕತ್ವದಲ್ಲಿ ಒಂದೂ ಐಸಿಸಿ ಟ್ರೋಫಿ ಗೆದ್ದಿಲ್ಲ. ಅದಕ್ಕೆ ನನ್ನನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದ್ದಾರೆ ಎನ್ನುವುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಕೊಹ್ಲಿ ಹೇಳಿದ್ದರು.