ಕೊಲಂಬೊ (ಶ್ರೀಲಂಕಾ): ಏಷ್ಯಾ ಕಪ್ ಸೂಪರ್ ಫೋರ್ ಹಂತದ ಹಣಾಹಣಿ ಪುನಾರಂಭಿಸಲು ಭಾರತ ಮತ್ತು ಪಾಕಿಸ್ತಾನ ತಂಡಗಳು ಸಜ್ಜಾಗಿವೆ. ಅಭಿಮಾನಿಗಳ ಕಾತುರವಂತೂ ಹೇಳತೀರದಾಗಿದೆ. ಈ ನಡುವೆ, ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್, ಕ್ರಿಕೆಟ್ ಅಭಿಮಾನಿಗಳಿಗೆ ಕೊಲಂಬೊದ ಸದ್ಯದ ಹವಾಮಾನ ಅಪ್ಡೇಟ್ ನೀಡಿದ್ದಾರೆ.
ಪ್ರೇಮದಾಸ ಮೈದಾನದಲ್ಲಿ ಭಾನುವಾರ 24.1 ಓವರ್‌ಗಳ ನಂತರ ಮಳೆಯ ಆಟ ಶುರುವಾಗಿತ್ತು. ಧಾರಾಕಾರ ಮಳೆಯಿಂದಾಗಿ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಅಪೂರ್ಣಗೊಂಡಿತ್ತು. ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಯಿತು. ವಿರಾಟ್ ಕೊಹ್ಲಿ (8*) ಮತ್ತು ಕೆ.ಎಲ್.ರಾಹುಲ್ (17*) ರನ್ ಗಳಿಸಿದ್ದರು. ನಾಯಕ ರೋಹಿತ್ ಶರ್ಮಾ (56) ಮತ್ತು ಶುಭ್‌ಮನ್ ಗಿಲ್ (58) ಅಮೋಘ ಅರ್ಧಶತಕಗಳ ನೆರವಿನಿಂದ ಭಾರತ 2 ವಿಕೆಟ್ಗಳ ನಷ್ಟಕ್ಕೆ 147 ರನ್ಗಳನ್ನು ಕಲೆ ಹಾಕಿದೆ.
ವಾಸಿಂ ಅಕ್ರಂ ಹೇಳಿಕೆ: ರಾತ್ರಿಯಿಡೀ ಮಳೆ ನಿಂತು..ನಿಂತು.. ಬರುತ್ತಲೇ ಇತ್ತು. ಇದೀಗ ಮೈದಾನದ ಸುತ್ತ ಮೋಡಗಳು ಸುತ್ತುವರಿದಿವೆ. ಆದ್ರೆ ತಣ್ಣನೆಯ ಗಾಳಿಯೂ ಬೀಸುತ್ತಿದೆ. ಸದ್ಯದ ಪರಿಸ್ಥಿತಿ ಉತ್ತಮವಾಗಿದೆ. ಆದರೆ ಪಂದ್ಯ ಪ್ರಾರಂಭವಾದಾಗ ಏನಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಮೋಡ ಕವಿದ ವಾತಾವರಣ ನೋಡಲು ನಿಜವಾಗಿಯೂ ಹತಾಶೆಯಾಗುತ್ತದೆ. ಆದರೆ ಹವಾಮಾನ ನಿಯಂತ್ರಣ ಯಾರಿಂದಲೂ ಸಾಧ್ಯವಿಲ್ಲ. ನಾವು ಪ್ರಾರ್ಥಿಸಬಹುದು ಅಷ್ಟೇ. ಇಂದಿನ ಪಂದ್ಯವನ್ನು ಎಂಜಾಯ್ ಮಾಡಲು ಎದುರು ನೋಡೋಣ ಎಂದು ಎಕ್ಸ್ ಪೋಸ್ಟ್ನಲ್ಲಿ ವಾಸಿಂ ವಿಡಿಯೋ ಮೂಲಕ ತಿಳಿಸಿದ್ದಾರೆ.