ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಫೈನಲ್ನಲ್ಲಿ ಸ್ಥಾನ ಪಡೆದಿದೆ. ಈ ವೇಳೆ ತಂಡದ ಪ್ರಮುಖ ಆಲ್‌ರೌಂಡರ್ ಗಾಯಕ್ಕೆ ತುತ್ತಾಗಿದ್ದು, ಅಂತಿಮ ಹಾಣಹಣಿಯಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ವೈದ್ಯಕೀಯ ವರದಿಗೂ ಮುನ್ನವೇ ಪರ್ಯಾಯ ವ್ಯವಸ್ಥೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚಿಂತಿಸಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿಯನ್ನು ಬಿಸಿಸಿಐ ಹಂಚಿಕೊಂಡಿಲ್ಲ.
ನಾಳೆ (ಭಾನುವಾರ) ಶ್ರೀಲಂಕಾ ವಿರುದ್ಧ ಭಾರತ ಏಷ್ಯಾಕಪ್ ಫೈನಲ್ ಆಡಲಿದೆ. ನಿನ್ನೆ ಬಾಂಗ್ಲಾದೇಶದೆ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಫೈನಲ್ ಪಂದ್ಯಕ್ಕೆ ಬ್ಯಾಕ್ಅಪ್ ಆಟಗಾರನಾಗಿ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಕರೆಯಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮೂಲಗಳು ತಿಳಿಸಿವೆ.
ಬಾಂಗ್ಲಾದೇಶದ ವಿರುದ್ಧ ಭಾರತದ ಅಂತಿಮ ಸೂಪರ್ ಫೋರ್ ಏಷ್ಯಾಕಪ್ ಹಣಾಹಣಿಯಲ್ಲಿ, ಬ್ಯಾಟಿಂಗ್ ಮಾಡುವಾಗ ಅಕ್ಷರ್ ಅವರ ಕೈಗೆ ಪೆಟ್ಟು ಬಿದ್ದಿತು. ಆದಾಗ್ಯೂ, ಫೈನಲ್‌ಗೆ ಅಕ್ಷರ್ ಸ್ಥಾನಮಾನದ ಬಗ್ಗೆ ತಂಡದ ಆಡಳಿತವು ಇನ್ನೂ ಅಂತಿಮ ಕರೆಯನ್ನು ತೆಗೆದುಕೊಂಡಿಲ್ಲ. ಅಕ್ಷರ್ ಇದುವರೆಗೆ ಪಂದ್ಯಾವಳಿಯಲ್ಲಿ ಎರಡು ಪಂದ್ಯಗಳಲ್ಲಿ ಆಡಿದ್ದಾರೆ, 34.00 ಸರಾಸರಿಯಲ್ಲಿ 68 ರನ್ ಗಳಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧ 42 ರನ್ ಗಳಿಸಿದರಾದರೂ, ಇದು 266 ರನ್‌ಗಳ ರನ್ ಗುರಿ ಮುಟ್ಟುವಲ್ಲಿ ಸಹಕಾರಿ ಆಗಲಿಲ್ಲ. ಬೌಲಿಂಗ್ನಲ್ಲಿ ನಿನ್ನೆ ಒಂದು ವಿಕೆಟ್ ಕೂಡ ಪಡೆದಿದ್ದಾರೆ.
ಮಾಹಿತಿಯ ಪ್ರಕಾರ, ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಅವರ ಮೊಣಕೈಗೆ ಬಾಲ್ ಜೋರಾಗಿ ಬಿದ್ದ ಪರಿಣಾಮ ಗಾಯಗೊಂಡಿದ್ದಾರೆ. ಇಂದು (ಶನಿವಾರ) ಅವರಿಗೆ ಸ್ಕ್ಯಾನ್ ಮಾಡಲಾಗಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಭಾನುವಾರದ ಫೈನಲ್‌ಗೆ ಅವರು ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ. ಪ್ರಕಟಿತ ವಿಶ್ವಕಪ್ ತಂಡದಲ್ಲಿ ಅಕ್ಷರ್ ಸ್ಥಾನ ಪಡೆದುಕೊಂಡಿದ್ದು, ಈ ವೇಳೆಗೆ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಅಲ್ಲದೇ ವಿಶ್ವಕಪ್ಗೂ ಮುನ್ನ ಭಾರತದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಅಕ್ಷರ್ ಸ್ಥಾನ ಪಡೆಯಲಿದ್ದಾರೆ.