ಸಿಡ್ನಿ: ಆಸ್ಟ್ರೇಲಿಯಾ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಮುಂಬರುವ ಐಪಿಎಲ್ ಆವೃತ್ತಿಗೆ ನಡೆಯುವ ಮೆಗಾ ಹರಾಜಿನಲ್ಲಿ ತಮ್ಮ ಹೆಸರು ನೋಂದಾಯಿಸಿರುವುದಾಗಿ ಖಚಿತಪಡಿಸಿದ್ದಾರೆ.
ಗುರುವಾರ 35ನೇ ವಸಂತಕ್ಕೆ ಕಾಲಿಟ್ಟಿರುವ ವಾರ್ನರ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ರೀಟೈನ್ ಮಾಡಿಕೊಳ್ಳುವ ನಿರೀಕ್ಷೆಯಿಲ್ಲ. ಅಲ್ಲದೇ ಮುಂದಿನ ವರ್ಷದಿಂದ ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ 2 ಹೊಸ ತಂಡಗಳು ಸೇರ್ಪಡೆಯಾಗುವುದಿರಿಂದ ತಾವೂ ಮೆಗಾ ಹರಾಜಿಗೆ ಹೋಗುವುದಾಗಿ ಆಸೀಸ್ ಬ್ಯಾಟರ್ ಖಚಿತಪಡಿಸಿದ್ದಾರೆ.
ಡೇವಿಡ್ ವಾರ್ನರ್ 2013ರಿಂದ 2021ರವರೆಗೆ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದರು. 2016ರಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಅವರನ್ನು ಇತ್ತೀಚೆಗೆ ಯುಎಇಯಲ್ಲಿ ಮುಗಿದ ಲೀಗ್ನಲ್ಲಿ ನಾಯಕತ್ವದಿಂದ ಕೆಳಗಿಳಿಸಿದ್ದಲ್ಲದೇ, ಅವರನ್ನು ಕೊನೆಯ 6 ಪಂದ್ಯಗಳಲ್ಲಿ ತಂಡದಿಂದಲೂ ಹೊರಗಿಡಲಾಗಿತ್ತು. ಇಷ್ಟೇ ಅಲ್ಲದೆ ಕೊನೆಯ ಲೀಗ್ ಪಂದ್ಯಗಳಲ್ಲಿ ಅವರನ್ನು ಸ್ಟೇಡಿಯಂಗೆ ಆಗಮಿಸಲು ಕೂಡ ಅವಕಾಶ ಮಾಡಿಕೊಟ್ಟಿರಲಿಲ್ಲ, ಹಾಗಾಗಿ ಅವರು ಮುಂದಿನ ಆವೃತ್ತಿಯಲ್ಲಿ ಬೇರೆ ತಂಡಗಳ ಜೊತೆಗೆ ಆಡುವ ಸಾಧ್ಯತೆ ಹೆಚ್ಚಾಗಿದೆ.
ನನ್ನ ಹೆಸರನ್ನು ಹರಾಜಿಗೆ ಸೇರಿಸಿದ್ದೇನೆ. ಇತ್ತೀಚಿನ ಐಪಿಎಲ್ ಗಮನಿಸಿದಾಗ ನನ್ನನ್ನು ಸನ್ರೈಸರ್ಸ್ ರೀಟೈನ್ ಮಾಡಿಕೊಳ್ಳುವ ನಿರೀಕ್ಷೆಯಿಲ್ಲ. ಹಾಗಾಗಿ ನಾನು ಹೊಸ ತಂಡದಲ್ಲಿ ಉತ್ಸಾಹದಿಂದ ಲೀಗ್ ಆರಂಭಿಸಲು ಎದುರು ನೋಡುತ್ತಿದ್ದೇನೆ ಎಂದು ವಾರ್ನರ್ ರೇಡಿಯೋ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ಡೇವಿಡ್ ವಾರ್ನರ್ 150 ಐಪಿಎಲ್ ಪಂದ್ಯಗಳಲ್ಲಿ 4 ಶತಕ ಮತ್ತು 50 ಅರ್ಧಶತಕ ಸಹಿತ 5,449 ರನ್ಗಳಿಸಿದ್ದಾರೆ.
ಇದನ್ನು ಓದಿ:ಪಾಕಿಸ್ತಾನ ವಿರುದ್ಧದ ಸೋಲಿಗೆ ಕೊಹ್ಲಿ ನೀಡಿದ ಕಾರಣ: ಜಡೇಜಾ ಅಸಮಾಧಾನ