ಸಿಡ್ನಿ (ಆಸ್ಟ್ರೇಲಿಯಾ):ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯ ಮೊದಲ ಪಂದ್ಯಕ್ಕೆ ಭಾನುವಾರ ಕ್ರಿಕೆಟ್ ಆಸ್ಟ್ರೇಲಿಯಾ 14 ಜನ ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ 37ರ ಹರೆಯದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರನ್ನು ಹೆಸರಿಸಲಾಗಿದೆ. ಪಾಕ್ ವಿರುದ್ಧದ ತವರಿನ ಈ ಟೆಸ್ಟ್ ಸರಣಿಯಲ್ಲಿ ವಾರ್ನರ್ ವಿದಾಯ ಹೇಳುವ ಸಾಧ್ಯತೆ ಇದೆ.
ಡಿಸೆಂಬರ್ 6 ರಿಂದ 9ರ ವರೆಗೆ ನಾಲ್ಕು ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ. ಡಿಸೆಂಬರ್ 14 ರಿಂದ 18ರ ವರೆಗೆ ಮೊದಲ ಟೆಸ್ಟ್ ಪಂದ್ಯ ಪರ್ತ್ ಮೈದಾನದಲ್ಲಿ ನಡೆಯಲಿದೆ. ಬಾಕ್ಸಿಂಗ್ ಡೇ ಯಂದು (ಡಿ.26-30) ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಎರಡನೇ ಟೆಸ್ಟ್ ಹಾಗೂ ಜನವರಿ 3 ರಿಂದ 7 ರವರೆಗೆ ಸಿಡ್ನಿಯಲ್ಲಿ ಮೂರನೇ ಪಂದ್ಯ ನಡೆಯಲಿದೆ. ಸಿಡ್ನಿಯಲ್ಲಿ ನಡೆಯುವ ಮೂರನೇ ಟೆಸ್ಟ್ನಲ್ಲಿ ವಾರ್ನರ್ ವಿದಾಯ ಹೇಳುವ ಸಾಧ್ಯತೆ ಇದೆ.
ವಾರ್ನರ್ ಅವರ ಇತ್ತೀಚಿನ ಟೆಸ್ಟ್ ಫಾರ್ಮ್ ಉತ್ತಮವಾಗಿಲ್ಲ. ಅವರು 2019ರಲ್ಲಿ ಪಾಕ್ ವಿರುದ್ಧ ಅಡಿಲೇಡ್ನಲ್ಲಿ ತ್ರಿಶತಕ ದಾಖಲಿಸಿದ್ದರು. ನಂತರ ಅವರು ಕೆಂಪು ಚೆಂಡಿನಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ಹೀಗಾಗಿ ವಾರ್ನರ್ ಸ್ವತಃ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯನ್ನು ಪಡೆಯುವುದಾಗಿ ಹೇಳಿದ್ದರು. ವೈಟ್ ಬಾಲ್ ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ಹಾಗೇ ಸಿಡ್ನಿಯಲ್ಲಿ ಕೊನೆಯ ಟೆಸ್ಟ್ ಆಡುವುದಾಗಿ ಇಂಗಿತ ವ್ಯಕ್ತಪಡಿಸಿದ್ದರು. ಅವರ ಹೇಳಿಕೆಯಂತೆ ಇದು ಅಂತಿಮ ಟೆಸ್ಟ್ ಸರಣಿ ಆಗಬಹುದು ಎಂದು ಹೇಳಲಾಗುತ್ತದೆ.
ಲ್ಯಾನ್ಸ್ ಮಾರಿಸ್ಗೆ ಸ್ಥಾನ: ಮೊದಲ ಟೆಸ್ಟ್‌ಗೆ ಪ್ರಕಟವಾದ ಆಸ್ಟ್ರೇಲಿಯಾದ ತಂಡದಲ್ಲಿ ಅನ್‌ಕ್ಯಾಪ್ಡ್ ವೇಗಿ ಲ್ಯಾನ್ಸ್ ಮಾರಿಸ್ ಸ್ಥಾನ ಪಡೆದುಕೊಂಡಿದ್ದಾರೆ. ಲ್ಯಾನ್ಸ್ ಮಾರಿಸ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ 'ದಿ ವೈಲ್ಡ್ ಥಿಂಗ್' ಎಂದು ಹೆಸರು ಪಡೆದುಕೊಂಡಿದ್ದಾರೆ. ಲ್ಯಾನ್ಸ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಕೇವಲ 22 ಪಂದ್ಯಗಳಲ್ಲಿ 25.44 ಸರಾಸರಿಯಲ್ಲಿ 74 ವಿಕೆಟ್‌ಗಳನ್ನು ಪಡೆದಿದ್ದಾರೆ.