ಸಿಡ್ನಿ (ಆಸ್ಟ್ರೇಲಿಯಾ) :ಕೊನೆಯ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಬೀಸಿದ ಡೇವಿಡ್ ವಾರ್ನರ್ ತಂಡಕ್ಕೆ ಗೆಲುವು ತಂದುಕೊಡುವ ಮೂಲಕ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ಇನ್ನಿಂಗ್ಸ್ ಮುಗಿಸಿದರು. ಪಾಕಿಸ್ತಾನ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ಅರ್ಧಶತಕ ಬಾರಿಸಿದರು. ಇದರೊಂದಿಗೆ ಆಸೀಸ್ 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿತು.
ನಾಲ್ಕನೇ ದಿನದಾಟದಲ್ಲಿ ಗೆಲುವಿಗೆ 130 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ, ವಾರ್ನರ್ ಮತ್ತು ಲಬುಶೇನ್ ಅವರ ಅರ್ಧಶತಕ ಬಲದಿಂದ 2 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು. ಆರಂಭಿಕನಾಗಿ ವಾರ್ನರ್ ಮೈದಾನಕ್ಕಿಳಿದಾಗ ಪ್ರೇಕ್ಷಕರು ಎದ್ದು ನಿಂತು ಕರತಾಡನ ಮಾಡಿದರು. ಕೊನೆಯ ಇನಿಂಗ್ಸ್ನಲ್ಲಿ ಅಭಿಮಾನಿಗಳನ್ನು ನಿರಾಸೆ ಮಾಡದ ವಾರ್ನರ್ ಲೀಲಾಜಾಲವಾಗಿ ಬ್ಯಾಟ್ ಬೀಸಿ 75 ಎಸೆತಗಳಲ್ಲಿ 57 ರನ್ ಗಳಿಸಿದರು.
ಗೆಲುವಿಗೆ 11 ರನ್ ಅಗತ್ಯವಿದ್ದಾಗ ಆಫ್ ಸ್ಪಿನ್ನರ್ ಸಾಜಿದ್ ಖಾನ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದು ಔಟಾದರು. ಈ ಮೂಲಕ ವಾರ್ನರ್ ಟೆಸ್ಟ್ ಕ್ರಿಕೆಟ್ಗೂ ತೆರೆಬಿತ್ತು. ಪಾಕ್ನ ಕ್ರಿಕೆಟಿಗರು ಕೈಕುಲುಕಿ ಶುಭಾಶಯ ಕೋರಿದರು. ಬಳಿಕ ವಾರ್ನರ್ ತಮ್ಮದೇ ಶೈಲಿಯಲ್ಲಿ ಅಭಿಮಾನಿಗಳತ್ತ ಬ್ಯಾಟ್, ಹೆಲ್ಮೆಟ್ ಅನ್ನು ಎತ್ತುವ ಮೂಲಕ ಧನ್ಯವಾದ ಹೇಳಿದರು. ಈ ವೇಳೆ ಕ್ರೀಡಾಂಗಣದಲ್ಲಿ ಅಬ್ಬರದ ಚಪ್ಪಾಳೆ ಸದ್ದು ಕೇಳಿಬಂತು.
ಐದನೇ ಅತ್ಯಧಿಕ ರನ್ ಸರದಾರ:ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಪರವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿದ ಐದನೇ ಆಟಗಾರ. ಅವರು 112 ಟೆಸ್ಟ್ ಪಂದ್ಯಗಳಲ್ಲಿ 8786 ರನ್ ಗಳಿಸಿದ್ದಾರೆ. ಇದರಲ್ಲಿ 26 ಶತಕ, 3 ದ್ವಿಶತಕ, 37 ಅರ್ಧಶತಕಗಳಿವೆ. ಕೊನೆಯ ಟೆಸ್ಟ್ ನಡುವೆಯೇ ಆಸೀಸ್ ಬ್ಯಾಟರ್ ಏಕದಿನಕ್ಕೂ ಗುಡ್ಬೈ ಹೇಳಿದ್ದಾರೆ. ಅಗತ್ಯವಿದ್ದಲ್ಲಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಡುವುದಾಗಿ ಹೇಳಿಕೆ ನೀಡಿದ್ದಾರೆ.
ಕ್ಲೀನ್ಸ್ವೀಪ್ ಸಾಧನೆ:ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ 3-0ದಿಂದ ಕ್ಲೀನ್ಸ್ವೀಪ್ ಮಾಡಿತು. ಕೊನೆಯ ಪಂದ್ಯದಲ್ಲಿ 8 ವಿಕೆಟ್ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 313 ರನ್ ಗಳಿಸಿದರೆ, ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 115 ರನ್ಗೆ ಆಲೌಟ್ ಆಯಿತು. ಇತ್ತ ಆತಿಥೇಯ ತಂಡ ಮೊದಲ ಇನಿಂಗ್ಸ್ನಲ್ಲಿ 299 ರನ್ ಗಳಿಸಿ 14 ರನ್ಗಳ ಹಿನ್ನಡೆ ಅನುಭವಿಸಿತ್ತು. ಎರಡನೇ ಇನಿಂಗ್ಸ್ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವಿಗೆ ಬೇಕಿದ್ದ 130 ರನ್ ಗಳಿಸಿತು. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 360 ರನ್, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 79 ರನ್‌ಗಳಿಂದ ಕಾಂಗರೂ ಪಡೆ ಜಯ ಸಾಧಿಸಿತ್ತು.
ಇದನ್ನೂ ಓದಿ:ಟಿ20 ಸರಣಿ: ಭಾರತೀಯ ವನಿತೆಯರ ಆಲ್ರೌಂಡರ್ ಆಟ - ಆಸೀಸ್ ವಿರುದ್ಧ ಶುಭಾರಂಭ