ಲಂಡನ್ : ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಇತ್ತೀಚೆಗೆ ರನ್ ಗಳಿಸುವಲ್ಲಿ ಯಶಸ್ವಿಯಾಗುತ್ತಿಲ್ಲ ಎಂದು ಅವರ ದೇಶದ ಮಾಧ್ಯಮಗಳು ಸರಣಿ ವರದಿ ಮಾಡಿದ್ದವು. ಅಲ್ಲದೇ ಫಾರ್ಮ್ನಲ್ಲಿರಿದ ವಾರ್ನರ್ ಅವರನ್ನು ತಂಡದಿಂದ ಹೊರಗಿಡಬೇಕು ಎಂದು ಸುದ್ದಿಗಳು ಹರಿದಾಡಿದ್ದವು. ಕಳೆದ ವರ್ಷ ಕೊನೆಯಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯ ಸಲುವಾಗಿ ಭಾರತಕ್ಕೆ ಬಂದಿದ್ದಾಗ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಕ್ಕಾಗಿ ಮತ್ತೆ ಟೀಕೆಗೆ ಒಳಗಾಗಿದ್ದರು. ಈಗ ಸ್ವತಃ ಅವರೇ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ 17 ಟೆಸ್ಟ್‌ಗಳಲ್ಲಿ ಕೇವಲ 1 ಶತಕವನ್ನು ಗಳಿಸಿದ್ದಾರೆ ಅಷ್ಟೇ. ಭಾರತದಲ್ಲಿ ನಡೆದ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ನಾಯಕತ್ವವನ್ನು ವಹಿಸಿಕೊಂಡು 6 ಅರ್ಧಶತಕಗಳನ್ನು ಗಳಿಸಿದ್ದಾರೆ. ಒಟ್ಟಾರೆ ಈ ಆವೃತ್ತಿಯಲ್ಲಿ 36.86ರ ಸರಾಸರಿಯಲ್ಲಿ 516 ರನ್ಗಳಿಸಿದ್ದಾರೆ. ಆದರೆ ಅವರ ಬ್ಯಾಟ್ನಿಂದ ಸಿಡಿದ ಸಿಕ್ಸ್ಗಳು ಕೇವಲ 10 ಮತ್ತು 69 ಬೌಂಡರಿಗಳನ್ನು ಗಳಿಸಿದ್ದಾರೆ. ಮೊದಲು ನಾಲ್ಕು ಅರ್ಧಶತಕಗಳಲ್ಲಿ ಅವರು ಒಂದೇ ಒಂದು ಸಿಕ್ಸ್ ಗಳಿಸಿರಲಿಲ್ಲ. ಈ ಬಗ್ಗೆ ಟೀಕೆಗೆ ಒಳಗಾಗಿದ್ದರು.
ಈ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ನಂತರ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ನಿವೃತ್ತಿ ಹೇಳುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು. ಆದರೆ ವೈಟ್ ಜರ್ಸಿಯ ನಿವೃತ್ತಿಯ ಬಗ್ಗೆ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಟಿಯಲ್ಲಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಮಾತನಾಡಿದ ಅವರು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, ಆ್ಯಶಸ್ ಸರಣಿಯಲ್ಲಿ ರನ್ ಗಳಿಸಲು ಸಾಧ್ಯವಾದರೆ ನಂತರ ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನದ ಪ್ರವಾಸ ಬೆಳೆಸಿದಾಗ ಆಡಲು ಅವಕಾಶ ಸಿಕ್ಕರೆ ಅದೇ ನನಗೆ ಟೆಸ್ಟ್ನ ಕೊನೆಯ ಸರಣಿ ಆಗಿರಲಿದೆ. ಸರಣಿಯ ಕೊನೆಯ ಪಂದ್ಯ ನಡೆದ ನಂತರ ಅವರ ತವರು ಮೈದಾನವಾದ ಸಿಡ್ನಿಯಲ್ಲಿ ಘೋಷಣೆ ಮಾಡುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.