ಕರ್ನಾಟಕ

karnataka

ETV Bharat / sports

ವಿಶ್ವಕಪ್ ಕ್ರಿಕೆಟ್‌: ಕ್ಷಮೆ ಯಾಚಿಸಿ, ಭಾರತವನ್ನು ಹೊಗಳಿದ ಡೇವಿಡ್​ ವಾರ್ನರ್​

David Warner: ವಿಶ್ವಕಪ್ ಕ್ರಿಕೆಟ್​ ಫೈನಲ್​ ಪಂದ್ಯದಲ್ಲಿ ಭಾರತದೆದುರು ಆಸ್ಟ್ರೇಲಿಯಾ ಐತಿಹಾಸಿಕ ಗೆಲುವು ಸಾಧಿಸಿತ್ತು.

ಡೇವಿಡ್​ ವಾರ್ನರ್​
ಡೇವಿಡ್​ ವಾರ್ನರ್​

By ETV Bharat Karnataka Team

Published : Nov 21, 2023, 2:08 PM IST

Updated : Nov 21, 2023, 2:14 PM IST

ವಿಶ್ವಕಪ್​ ಕಳೆದುಕೊಂಡು ಬೇಸರದಲ್ಲಿರುವ ಭಾರತೀಯ ಕ್ರಿಕೆಟ್​ ಅಭಿಮಾನಿಗಳಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಡೇವಿಡ್​ ವಾರ್ನರ್ ಕ್ಷಮೆ ಕೇಳಿದ್ದಾರೆ. ಇದೇ ಸಂದರ್ಭದಲ್ಲಿ ವಿಶ್ವಕಪ್ ಯಶಸ್ಸಿಗಾಗಿ​ ಭಾರತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಪೋಸ್ಟ್​ ಮಾಡಿರುವ ವಾರ್ನರ್,​ 'ನಾನು ಕ್ಷಮೆ ಯಾಚಿಸುತ್ತೇನೆ. ಫೈನಲ್ ಉತ್ತಮವಾಗಿತ್ತು. ಕ್ರೀಡಾಂಗಣದ ವಾತಾವರಣ ಅದ್ಭುತವಾಗಿತ್ತು. ಭಾರತ ನಿಜವಾಗಿಯೂ ಗಂಭೀರವಾಗಿ ಟೂರ್ನಿ​ ನಡೆಸಿತು. ಎಲ್ಲರಿಗೂ ಧನ್ಯವಾದಗಳು' ಎಂದು ​ಬರೆದುಕೊಂಡಿದ್ದಾರೆ.

ಭಾನುವಾರ (ನ.19) ಗುಜರಾತ್​ನ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತೆದುರು ವಿಜಯ ಸಾಧಿಸಿದ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್​ ಗೆದ್ದುಕೊಂಡಿತ್ತು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ ಎಲ್ಲಾ ಪಂದ್ಯಗಳನ್ನೂ ಗೆದ್ದುಕೊಂಡು ಬಂದಿದ್ದ ಟೀಮ್​ ಇಂಡಿಯಾ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಇತ್ತ ಕಾಂಗರೂ ಟೀಂ ಮೊದಲೆರಡು ಪಂದ್ಯಗಳನ್ನು ಸೋತು ಲೀಗ್​ ಹಂತದಲ್ಲೇ ಹೊರಬೀಳುವ ಆತಂಕದಲ್ಲಿತ್ತು. ಬಳಿಕ ಆಸ್ಟ್ರೇಲಿಯಾ ಆಟಗಾರರು ಸಂಘಟನಾತ್ಮಕ ಆಟವಾಡಿ ಅಂತಿಮವಾಗಿ ಕಪ್‌ ಎತ್ತಿ ಹಿಡಿದು ಸಂಭ್ರಮಿದರು.

ಸೋಲಿನ ಕಹಿ ಘಟನೆಯಿಂದ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಹೊರಬರಲು ಸಾಧ್ಯವಾಗುತ್ತಿಲ್ಲ. ಪಂದ್ಯದ ಬಳಿಕ ಮೈದಾನದಲ್ಲಿ ಆಟಗಾರರು ಅಳುವುದನ್ನು ನೋಡಿ ಅತ್ತವರೆಷ್ಟೋ? ಇಂತಹ ಸಂದರ್ಭದಲ್ಲಿ ವಾರ್ನರ್​ ಮಾಡಿರುವ ಒಂದು ಪೋಸ್ಟ್​ ಅಭಿಮಾನಿಗಳಿಗೆ ಸಂತಸ ತಂದಿದೆ. ಇದರ ಹೊರತಾಗಿಯೂ ಭಾರತದೊಂದಿಗೆ ವಾರ್ನರ್​ ಒಳ್ಳೆಯ ಸಂಬಂಧ ಇಟ್ಟುಕೊಂಡಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ.

ವಾರ್ನರ್​ ತನ್ನ ಎರಡನೇ ಪುತ್ರಿಗೆ 'ಇಂಡಿ ರೇ​' ಎಂಬ ಹೆಸರಿಟ್ಟಿದ್ದಾರೆ. ಇದು ಭಾರತದ ಮೇಲಿನ ಪ್ರೀತಿಗಾಗಿ ಎಂಬುದನ್ನು ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಅಲ್ಲದೆ, ಐಪಿಎಲ್‌​ನಲ್ಲೂ ಆಕ್ರಮಣಕಾರಿ ಆಟವಾಡಿರುವ ವಾರ್ನರ್​ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಭಾರತೀಯ ಕ್ರಿಕೆಟ್​ ಆಟಗಾರೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ.

ಇನ್ನು ತೆಲುಗಿನ ಸೂಪರ್​ ಹಿಟ್ ಸಿನಿಮಾ​ 'ಪುಷ್ಪ'ದ ಹಾಡು ಮತ್ತು ಡೈಲಾಗ್​ಗಳಿಗೆ ವಾರ್ನರ್​ ತಮ್ಮ ಮಕ್ಕಳೊಂದಿಗೆ ರೀಲ್ಸ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ದೊಡ್ಡ ಮಟ್ಟದಲ್ಲಿ ಭಾರತೀಯರ ಮನ ಗೆದ್ದಿದ್ದರು. ಪಾಕಿಸ್ತಾನದ ಮೇಲೆ ಶತಕ ಹೊಡೆದ ವೇಳೆಯೂ ಕೂಡ ಪುಷ್ಪ ಚಿತ್ರದಲ್ಲಿ ಬರುವ ಮಾಸ್​ ಡೈಲಾಗ್‌ ವೊಂದರ ಆ್ಯಕ್ಷನ್​ ಮಾಡಿ ಸಂಭ್ರಮಾಚರಣೆ ಮಾಡಿದ್ದರು. ಈ ನಡೆಗೆ ನೆಟ್ಟಿಗರೊಬ್ಬರು ವಾರ್ನರ್​ ಅವರಿಗೆ ಆಧಾರ್​ ಕಾರ್ಡ್​ ಕೊಟ್ಟು ಇಂಡಿಯಾದಲ್ಲಿ ಉಳಿಸಿಕೊಳ್ಳಿ ಎಂದು ಕಾಮೆಂಟ್​ ಮಾಡಿದ್ದು ಸಾಕಷ್ಟು ವೈರಲ್​ ಆಗಿತ್ತು.

ಇದನ್ನೂ ಓದಿ:ವಿರಾಟ್​ ವಿಕೆಟ್​ ಪಡೆದಾಗ ಲಕ್ಷಾಂತರ ಅಭಿಮಾನಿಗಳ ಮೌನ ಬಹಳ ತೃಪ್ತಿ ನೀಡಿತು: ಆಸ್ಟ್ರೇಲಿಯಾ ನಾಯಕ ಕಮಿನ್ಸ್‌

Last Updated : Nov 21, 2023, 2:14 PM IST

ABOUT THE AUTHOR

...view details