ನವದೆಹಲಿ:ಇಂದು ಭಾರತದ ಟೆಸ್ಟ್ ಕ್ರಿಕೆಟ್ಗೆ ಅವಿಸ್ಮರಣಿಯ ದಿನವಾಗಿದೆ. 2001 ಮಾರ್ಚ್ 14 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮಾಜಿ ಅನುಭವಿ ಬ್ಯಾಟ್ಸ್‌ಮನ್‌ಗಳಾದ ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ದಾಖಲೆ ಜೊತೆಯಾಟ ನಡೆಸಿ ಟೀಂ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಈ ಪಂದ್ಯದಲ್ಲಿ ಭಾರತ ಕೂಡ ಗೆಲುವು ದಾಖಲಿಸಿತ್ತು.
ಟೆಸ್ಟ್‌ನ ಮೊದಲ ಮೂರು ದಿನಗಳ ಸ್ಥಿತಿ (11-13 ಮಾರ್ಚ್):ಈಡನ್ ಗಾರ್ಡನ್‌ನಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಸ್ಟೀವ್ ವಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಸ್ಟೀವ್ ವಾ (110) ಮತ್ತು ಮ್ಯಾಥ್ಯೂ ಹೇಡನ್ (97) ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್ ಗಳಿಸಿತು. ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಈ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದರು. 445 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡದ ಮೊದಲ ಇನ್ನಿಂಗ್ಸ್ ಕೇವಲ 171 ರನ್‌ಗಳಿಗೆ ಆಲ್ಔಟ್ ಆಗಿತ್ತು. ಭಾರತ ಆಸ್ಟ್ರೇಲಿಯಾಕ್ಕಿಂತ 274 ರನ್ನ ಹಿನ್ನಡೆ ಅನುಭವಿಸಿತ್ತು. ಆಸ್ಟ್ರೇಲಿಯಾ ಭಾರತಕ್ಕೆ ಫಾಲೋಆನ್ ನೀಡಿತು.
ಇದಾದ ನಂತರ ಭಾರತ ತಂಡದಲ್ಲಿ ನಡೆದದ್ದಯ ಮ್ಯಾಜಿಕ್ ಎಂದೇ ಹೇಳಬೇಕು. ಫಾಲೋ ಆನ್ ಹೇರಿಕೋಂಡ ಟೀಂ ಇಂಡಿಯಾ 115ಕ್ಕೆ ಮೂರು ವಿಕೆಟ್ ಕಳೆದುಕೊಂಡಿತ್ತು. ಆಗ 'ವೆರಿ-ವೆರಿ ಸ್ಪೆಷಲ್' ಲಕ್ಷ್ಮಣ್ ಮೈದಾನಕ್ಕೆ ಬಂದರು. ಮೈದಾನಕ್ಕೆ ಬಂದ ಅವರು ಗಂಗೂಲಿ ಜೊತೆಗೂಡಿ ಲಕ್ಷ್ಮಣ್ ಶತಕ ಪೂರೈಸಿ ತಂಡ ಮೊತ್ತವನ್ನು 200ರ ಗಡಿ ದಾಟಿಸಿದರು. ಮೂರನೇ ದಿನದಾಟದ ಅಂತ್ಯಕ್ಕೆ ಭಾರತದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿದೆ. ವಿವಿಎಸ್ ಲಕ್ಷ್ಮಣ್ (109) ಮತ್ತು ರಾಹುಲ್ ದ್ರಾವಿಡ್ (7) ರನ್ ಗಳಿಸಿ ಅಜೇಯರಾಗುಳಿದರು.