ನವದೆಹಲಿ:ಭಾರತ ತಂಡದ ಮಾಜಿ ನಾಯಕ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ (Rahul Dravid) ಅವರು ಟೀಂ ಇಂಡಿಯಾ ಮುಖ್ಯ ಕೋಚ್ ಆದ ಬೆನ್ನಲ್ಲೇ, ತೆರವಾಗಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಹುದ್ದೆಯನ್ನು (National Cricket Academy) ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ (VVS Laxman) ಅಲಂಕರಿಸಲಿದ್ದಾರೆ ಎಂದು ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ ಭಾನುವಾರ ಖಚಿತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ದಾದಾ, ಲಕ್ಷ್ಮಣ್ ಎನ್‌ಸಿಎ (NCA Head) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದಿದ್ದಾರೆ. ಇತ್ತೀಚೆಗೆ ರಾಹುಲ್ ದ್ರಾವಿಡ್ ಅವರು ಭಾರತ ಕ್ರಿಕೆಟ್ ತಂಡದ ಕೋಚ್ ಆಗುವಲ್ಲಿಯೂ ಕೂಡ ಸೌರವ್ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಲಕ್ಷ್ಮಣ್ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಬಿಸಿಸಿಐ (Board of Control for Cricket in India) ಕಾರ್ಯದರ್ಶಿ ಜಯ್ ಶಾ ಹಾಗೂ ಹಿರಿಯ ಅಧಿಕಾರಿಗಳು ಕೂಡ ಎನ್‌ಸಿಎ ಹುದ್ದೆಗೇರಲು ಬೆಂಬಲ ವ್ಯಕ್ತಪಡಿಸಿದ್ದರು.
ಮಾಜಿ ಕ್ರಿಕೆಟಿಗ ವಿವಿಎಸ್, ಯುವ ಪಡೆಯನ್ನು ಕಟ್ಟುವಲ್ಲಿ ನಿಸ್ಸಂದೇಹವಾಗಿ ಮುಂಚೂಣಿಯಲ್ಲಿರಲಿದ್ದಾರೆ. ಅಲ್ಲದೆ ಸದ್ಯ ಕೋಚ್ ಆಗಿರುವ ದ್ರಾವಿಡ್ (Indian Cricket Team Head coach) ಜೊತೆ ವೃತ್ತಿಜೀವನದ ಆರಂಭದಿಂದಲೂ ವಿಶೇಷ ಬಾಂಧವ್ಯ ಹಂಚಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಆ ಇಬ್ಬರು ದಿಗ್ಗಜರು ಒಟ್ಟಿಗೆ ಕಾರ್ಯ ನಿರ್ವಹಿಸುವುದು ಪರಿಪೂರ್ಣ ಸಂಯೋಜನೆಯಾಗಿದೆ. ಈ ಇಬ್ಬರು ಮಾಜಿ ಕ್ರಿಕೆಟಿಗರು ಮುಂದಿನ ಪೀಳಿಗೆಯ ಕ್ರಿಕೆಟಿಗರನ್ನು ಸಜ್ಜುಗೊಳಿಸಲಿದ್ದಾರೆ ಎಂದು ಬಿಸಿಸಿಐ (BCCI) ಮೂಲಗಳು ತಿಳಿಸಿವೆ.