ಮುಂಬೈ: ಯುಎಇಯಲ್ಲಿ ನಿಗದಿಯಾಗಿರುವ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಅಭಿಯಾನಕ್ಕೆ ಕೆಲವೇ ದಿನ ಬಾಕಿ ಇರುವಾಗ ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಹೀಗಾಗಿ, ತಂಡದ ಹಂಗಾಮಿ ಕೋಚ್ ಜವಾಬ್ದಾರಿ ವಿವಿಎಸ್ ಲಕ್ಷ್ಮಣ್ ಅವರಿಗೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಅಧಿಕೃತ ಪ್ರಕಟಣೆ ಹೊರಡಿಸಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ವಿವಿಎಸ್ ಲಕ್ಷ್ಮಣ್ ಈಗಾಗಲೇ ಐರ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಟೀಂ ಇಂಡಿಯಾ ಜೊತೆ ಜಿಂಬಾಬ್ವೆಯಲ್ಲಿದ್ದ ಅವರು ಇದೀಗ ಕೆ ಎಲ್ ರಾಹುಲ್, ದೀಪಕ್ ಹೂಡಾ ಹಾಗೂ ಆವೇಶ್ ಖಾನ್ ಜೊತೆ ನೇರವಾಗಿ ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ಗೆ ಕೋವಿಡ್ ದೃಢ: ಬಿಸಿಸಿಐ
ಏಷ್ಯಾಕಪ್ ಟೂರ್ನಿಗೋಸ್ಕರ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ, ವಿವಿಎಸ್ ಲಕ್ಷ್ಮಣ್ ಅವರಿಗೆ ಹಂಗಾಮಿ ಕೋಚ್ ಹೊಣೆ ವಹಿಸಲಾಗಿತ್ತು. ಆದರೆ, ಇದೀಗ ದ್ರಾವಿಡ್ ಕೋವಿಡ್ ಸೋಂಕಿಗೊಳಗಾಗಿರುವ ಕಾರಣ ಏಷ್ಯಾಕಪ್ನಲ್ಲೂ ತಂಡದ ಕೋಚ್ ಆಗಿ ಲಕ್ಷ್ಮಣ್ ಸೇವೆ ಮುಂದುವರೆಸಲಿದ್ದಾರೆ. ದ್ರಾವಿಡ್ ಅವರ ಕೋವಿಡ್ ವರದಿ ನೆಗೆಟಿವ್ ಬಂದ ಮೇಲೆ ಅವರು ತಂಡ ಸೇರಿಕೊಳ್ಳಲಿದ್ದಾರೆಂದು ಬಿಸಿಸಿಐ ತಿಳಿಸಿದೆ.
ಆಗಸ್ಟ್ 27ರಿಂದ ಏಷ್ಯಾಕಪ್ ಆರಂಭಗೊಳ್ಳಲಿದೆ. ಆಗಸ್ಟ್ 28 ರಂದು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ ಆಡಲಿದೆ. ಕಳೆದ ವರ್ಷ ಯುಎಇಯಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಬಾಬರ್ ಅಜಮ್ ತಂಡದ ವಿರುದ್ಧ 10 ವಿಕೆಟ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಉತ್ಸುಕವಾಗಿದೆ.