ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯೊಂದಿಗಿನ ರಾಹುಲ್ ದ್ರಾವಿಡ್ ಅವರ ಒಪ್ಪಂದದ ಅವಧಿ ಮುಗಿದ ನಂತರ ವಿವಿಎಸ್ ಲಕ್ಷ್ಮಣ್ ಅವರು ಭಾರತ ತಂಡದ ಮುಂದಿನ ಮುಖ್ಯ ಕೋಚ್ ಆಗಲಿದ್ದಾರೆ. 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಳಿಕ ಟೀಂ ಇಂಡಿಯಾ ವಿಶ್ವಕಪ್ ವಿಜೇತರಾಗದಿದ್ದರೆ, ರಾಹುಲ್ ದ್ರಾವಿಡ್ ಅವರ ಒಪ್ಪಂದದ ಅವಧಿ ಮುಗಿದ ತಕ್ಷಣ ವಿವಿಎಸ್ ಲಕ್ಷ್ಮಣ್ ಅವರನ್ನು ಮುಖ್ಯ ಕೋಚ್ ಆಗಿ ತರಲಾಗುವುದು ಎಂದು ಹೇಳಲಾಗುತ್ತಿದೆ. ವಿವಿಎಸ್ ಲಕ್ಷ್ಮಣ್ ಅವರು ಪ್ರಸ್ತುತ ಟೀಮ್ ಇಂಡಿಯಾದಲ್ಲಿ ಅರೆಕಾಲಿಕ ಕೋಚಿಂಗ್ ಮಾಡಿದ್ದಾರೆ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದ್ರಾವಿಡ್ಗೆ ನೆಗೆಟಿವ್ ಆಗುವ ಅಂಶಗಳು:ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆದ ನಂತರ ದೊಡ್ಡ ದೊಡ್ಡ ಸ್ಪರ್ಧೆಗಳಲ್ಲಿ ತಂಡ ಸೋತಿದೆ ಎಂಬ ಅಭುಪ್ರಾಯ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನ ನಂತರ ಕೋಚ್ ಹುದ್ದೆ ಮುಂದುವರೆಸುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಲಿದೆ. ಟೀ ಇಂಡಿಯಾ ಟಿ 20 ವಿಶ್ವಕಪ್‌ನ ಸೆಮಿ-ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಸೋಲನುಭವಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಸೋಲನುಭವಿಸಿತ್ತು. ಅಲ್ಲದೇ 2022 ಟಿ 20 ಏಷ್ಯಾ ಕಪ್‌ನ ಫೈನಲ್ ತಲುಪುವಲ್ಲೂ ಎಡವಿತ್ತು. ಇದೆಲ್ಲವೂ ದ್ರಾವಿಡ್ಗೆ ನೆಗೆಟಿವ್ ಅಂಶಗಳಾಗಿವೆ.
ಪುರುಷರ ತಂಡದ ಮುಖ್ಯ ಕೋಚ್ ಆಗಿ ವಿಸ್ತರಣೆಗೆ ಪರಿಗಣಿಸದಿರಲು ದ್ರಾವಿಡ್ ಈಗಾಗಲೇ ಯೋಚಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳು ತಿಳಿಸಿವೆ. ಟೀಂ ಇಂಡಿಯಾ ವಿಶ್ವಕಪ್ ವಿಜೇತರಾದರೆ, ಬಹುಶಃ ಈ ಯೋಜನೆಯನ್ನು ಮರುಪರಿಶೀಲಿಸಬಹುದು. ಇಲ್ಲದಿದ್ದರೆ ಪ್ರಸ್ತುತ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಮುಂದಿನ ಮುಖ್ಯ ಕೋಚ್ ಆಗಿ ನೇಮಕ ಮಾಡಬಹುದು.