ಸೌಂತಪ್ಟನ್(ಇಂಗ್ಲೆಂಡ್):ಜುಲೈ 7ರಂದು ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೊದಲ ಟಿ-20 ಪಂದ್ಯಕ್ಕಾಗಿ ಟೀಂ ಇಂಡಿಯಾಗೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ಸೇವೆ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯ ನಾಳೆ ಮುಕ್ತಾಯಗೊಳ್ಳಲಿದೆ. ಇದರ ಬೆನ್ನಲ್ಲೇ ಜುಲೈ 7 ರಿಂದ ಉಭಯ ತಂಡಗಳ ನಡುವೆ ಟಿ-20 ಸರಣಿ ಆರಂಭಗೊಳ್ಳಲಿದೆ. ಹೀಗಾಗಿ, ಮೊದಲ ಪಂದ್ಯಕ್ಕಾಗಿ ವಿವಿಎಸ್ ಲಕ್ಷ್ಮಣ್ ಕೋಚ್ ಆಗುವ ಸಾಧ್ಯತೆ ದಟ್ಟವಾಗಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ವಿವಿಎಸ್ ಲಕ್ಷ್ಮಣ್ ಈಗಾಗಲೇ ಜುಲೈ 26 ಹಾಗೂ 28ರಂದು ಐರ್ಲೆಂಡ್ ವಿರುದ್ಧ ನಡೆದ ಟಿ-20 ಪಂದ್ಯಕ್ಕಾಗಿ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಮ್ಮೆ ತಂಡದ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ. ಟೀಂ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಇರಲಿದ್ದು, ಮೊದಲ ಪಂದ್ಯಕ್ಕಾಗಿ ಮಾತ್ರ ಕೋಚ್ ಆಗಿ ಲಕ್ಷ್ಮಣ್ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.