ಪೌರಾಣಿಕ ಕಥೆ ಆಧಾರಿತ ಓಂ ರಾವುತ್ ಅವರ ನಿರ್ದೇಶನದ ಚಿತ್ರ ಆದಿಪುರುಷಕ್ಕೆ ನಾನಾ ವಿಮರ್ಶೆಗಳು ವ್ಯಕ್ತವಾಗಿವೆ. ಇದು ಟೀಸರ್ ಬಿಡುಗಡೆ ಆದಾಗಿನಿಂದ ಶುರುವಾಗಿತ್ತು. ಓಂ ರಾವುತ್ ರಾಮಾಯಣದ ಕಥೆಯನ್ನು ಸಿನಿಮಾ ರೂಪಕ್ಕೆ ತಂದಿದ್ದು ಪ್ರಭಾಸ್ ರಾಮನ ಪಾತ್ರ, ಕೃತಿ ಸನೋನ್ ಸೀತೆ ಹಾಗೂ ಸೈಫ್ ಅಲಿ ಖಾನ್ ರಾವಣ ಪಾತ್ರವನ್ನು ನಿಭಾಯಿಸಿದ್ದಾರೆ. ಸಿನಿಮಾದ ವಿಎಫ್ಎಕ್ಸ್ ಮತ್ತು ಸಂಭಾಷಣೆಗೆ ಧಾರ್ಮಿಕ ನಂಬಿಕೆ ಹೆಚ್ಚಿರುವರು ಋಣಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚಿತ್ರದ ಬಗ್ಗೆ ವ್ಯಾಪಕವಾಗಿ ಟೀಕೆಗಳೂ ಕೇಳಿ ಬಂದಿವೆ.
ಈಗ ಆದಿಪುರುಷ ಚಿತ್ರದ ಬಗ್ಗೆ ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ವಿಭಿನ್ನ ರೀತಿಯಲ್ಲಿ ವಿಮರ್ಶೆಯನ್ನು ಮಾಡಿದ್ದಾರೆ. ಟ್ವಿಟರ್‌ನಲ್ಲಿ ಸೆಹ್ವಾಗ್, "ಆದಿಪುರುಷ್ ದೇಖ್ಕರ್ ಪತಾ ಚಲಾ ಕಟ್ಟಪ್ಪ ನೆ ಬಾಹುಬಲಿ ಕೊ ಕ್ಯೂನ್ ಮಾರ ಥಾ. (ಆದಿಪುರುಷನನ್ನು ನೋಡಿದ ನಂತರ, ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದಿದ್ದಾನೆಂದು ನನಗೆ ಅರಿವಾಯಿತು)" ಎಂದು ಬರೆದಿದ್ದಾರೆ.
ಸೆಹ್ವಾಗ್ ಅವರ ಟ್ವೀಟ್ನಲ್ಲಿ ಪ್ರಭಾಸ್ ಅವರು ನಟಿಸಿ 2015 ರಲ್ಲಿ ಸೂಪರ್ ಹಿಟ್ ಆದ ಚಿತ್ರ ಬಾಹುಬಲಿ: ದಿ ಬಿಗಿನಿಂಗ್ ಬಗ್ಗೆ ಉಲ್ಲೇಖಿಸಿದ್ದಾರೆ. ಚಿತ್ರದಲ್ಲಿ ಮುಖ್ಯ ಪಾತ್ರಧಾರಿ ಬಾಹುಬಲಿ ತನ್ನ ಅರಮನೆಯ ಸೇನಾ ದಂಡಾಧಿಕಾರಿ ಕಟ್ಟಪ್ಪನಿಂದ ಕೊಲ್ಲಲ್ಪಡುತ್ತಾನೆ. ಎರಡನೇ ಭಾಗದ ಸಿನಿಮಾಕ್ಕೆ ಕಟ್ಟಪ್ಪ ಬಾಹುಬಲಿಯನ್ನು ಕೊಲ್ಲಲು ಕಾರಣ ಏನು ಎಂಬುದೇ ಲೀಡ್ ಆಗಿತ್ತು.
ಜೂನ್ 16 ರಂದು ಬಿಡುಗಡೆಯಾದ 'ಆದಿಪುರುಷ' ಮೊದಲ ಮೂರು ದಿನಗಳಲ್ಲಿ 300 ಕೋಟಿ ರೂಪಾಯಿಗಳ ಗಡಿ ದಾಟಿ ಭಾರೀ ಕಲೆಕ್ಷನ್ ಮಾಡಿದೆ. ಆದರೆ, ಅಂದಿನಿಂದ ಚಿತ್ರದ ಕಲೆಕ್ಷನ್ ಕ್ರಮೇಣ ಕಡಿಮೆಯಾಗಿದೆ. ಒಟ್ಟಾರೆ, 'ಆದಿಪುರುಷ' ಬಾಕ್ಸ್ ಆಫೀಸ್ ಗಳಿಕೆಯಲ್ಲಿ ರೂ.400 ಕೋಟಿಗೂ ಅಧಿಕ ಗಳಿಕೆಯಲ್ಲಿ ಯಶಸ್ವಿಯಾಗಿದೆ. ತೆಲುಗು ಅವತರಣಿಕೆಯೇ ರು.100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದು ಗಮನಾರ್ಹ.