ನವದೆಹಲಿ:ಇನ್ನು ಕೆಲವೇ ದಿನಗಳಲ್ಲಿ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಆರಂಭವಾಗಲಿದ್ದರೂ, ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಅದರಲ್ಲೂ ನಾಲ್ಕನೇ ಕ್ರಮಾಂಕದ ಆಟಗಾರ ಯಾರೆಂಬುದು ನಿರ್ಧಾರವಾಗಿಲ್ಲ. ಸದ್ಯ ಲಯದಲ್ಲಿರುವ ಇಶಾನ್ ಕಿಶನ್, ಶುಭ್ಮನ್ ಗಿಲ್ ಆರಂಭಿಕರಾಗಿ ಯಶಸ್ವಿಯಾಗಿದ್ದಾರೆ. ನಾಯಕ ರೋಹಿತ್ ಶರ್ಮಾ, ಗಾಯದಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ತಂಡ ಸೇರ್ಪಡೆಯಾದರೆ ಆರಂಭಿಕ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗಲಿದೆ.
ಈ ಎಲ್ಲ ಗೊಂದಲಕ್ಕೆ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು, ಉಪಾಯವೊಂದನ್ನು ಹುಡುಕಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಆಡುವ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅವರನ್ನು ನಾಲ್ಕನೇ ಕ್ರಮಾಂಕಕ್ಕೆ ಆಡಿಸಬೇಕು. ಆಗ ಇನ್ನೊಬ್ಬರನ್ನು ಮೂರನೇ ಸ್ಥಾನದಲ್ಲಿ ಆಡಿಸಬಹುದು ಎಂದು ಸಲಹೆ ನೀಡಿದ್ದಾರೆ.
4 ರಲ್ಲಿ ವಿರಾಟ್ ಆಡಿಸಿ:ಕ್ರೀಡಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಾಸ್ತ್ರಿ ಅವರು, ನಾನು ಕೋಚ್ ಆಗಿದ್ದಾಗ 2019 ರ ವಿಶ್ವಕಪ್ ವೇಳೆ ವಿರಾಟ್ ಕೊಹ್ಲಿಯನ್ನು 4ನೇ ಕ್ರಮಾಂಕದಲ್ಲಿ ಆಡಿಸಬೇಕು ಎಂದು ಭಾವಿಸಿದ್ದೆ. ಆದರೆ, ಕೈಗೂಡಿರಲಿಲ್ಲ. ವಿರಾಟ್ ಪ್ರಸ್ತುತ ಕ್ರಿಕೆಟ್ನ ಬ್ಯಾಟಿಂಗ್ ಸ್ಟಾರ್. ಈ ವರ್ಷ ಅದ್ಭುತ ಲಯದಲ್ಲಿದ್ದಾರೆ. ತಂಡದ ಸಮತೋಲನಕ್ಕಾಗಿ ಅವರನ್ನು 4ನೇ ಸ್ಥಾನಕ್ಕೆ ಆಡಿಸಬಹುದು ಎಂದು ಹೇಳಿದ್ದಾರೆ.
ಇಶಾನ್ ಕಿಶನ್ ಆರಂಭಿಕನಾಗಿ ಬ್ಯಾಟಿಂಗ್ ಆರಂಭಿಸಬೇಕು. ವಿರಾಟ್, ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಹೊಸ ಸ್ಥಾನಗಳಿಗೆ ಹೊಂದಿಕೊಳ್ಳಬೇಕು. ವಿರಾಟ್ರನ್ನು ಮೂರರಿಂದ ನಾಲ್ಕನೇ ಸ್ಥಾನಕ್ಕೆ ಆಡಿಸಿದರೆ, ಮಧ್ಯಮ ಕ್ರಮಾಂಕಕ್ಕೆ ಅನುಭವ ಮತ್ತು ಬ್ಯಾಟಿಂಗ್ ಬಲ ಹೆಚ್ಚಲಿದೆ ಎಂದು ಶಾಸ್ತ್ರಿ ಹೇಳಿದರು.