ಕೋಲ್ಕತ್ತಾ(ಪಶ್ಚಿಮ ಬಂಗಾಳ):ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾನುವಾರ ನಡೆದವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಅಮೋಘ ಗೆಲುವು ದಾಖಲಿಸಿತು. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಖಾತೆಗೆ ಮತ್ತೊಂದು ಶತಕ ಸೇರಿಸಿಕೊಂಡರು. ಪಂದ್ಯ ಮುಗಿದ ಬಳಿಕ ಕೊಹ್ಲಿ ನಡೆ ಅಭಿಮಾನಿಗಳ ಮೆಚ್ಚುಗೆ ಗಳಿಸಿತು.
ಮೈದಾನದ ಸಿಬ್ಬಂದಿ ಜೊತೆ ಫೋಟೋ ತೆಗೆಸಿಕೊಂಡ ವಿರಾಟ್ ಕೊಹ್ಲಿ ಸರಳತೆ ಮೆರೆದರು. ಸಿಬ್ಬಂದಿಯ ಮಧ್ಯೆ ಸಾಮಾನ್ಯರಂತೆ ಹೋಗಿ ನಿಂತುಕೊಂಡ ಕೊಹ್ಲಿ ಫೋಟೋಗೆ ಫೋಸ್ ಕೊಟ್ಟರು. ಈ ಸಂದರ್ಭ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದಕ್ಕೂ ಮುನ್ನ ಏಕದಿನ ಮಾದರಿಯ ಕ್ರಿಕೆಟ್ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲಿಸಿರುವ 49 ಶತಕಗಳನ್ನು ಕೊಹ್ಲಿ ಸರಿಗಟ್ಟಿದರು. ಈ ಸ್ಮರಣೀಯ ಕ್ಷಣಕ್ಕೆ ಕಳೆದ ಎರಡು ಪಂದ್ಯಗಳಿಂದ ಕೊಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದರು. ಇದೀಗ ಈ ಕಸಸು ನನಸಾಗಿದೆ. ಮುಂಬರುವ ದಿನಗಳಲ್ಲಿ ಕೊಹ್ಲಿ ಬ್ಯಾಟ್ನಿಂದ ಮತ್ತಷ್ಟು ಶತಕಗಳ ನಿರೀಕ್ಷೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿದ್ದಾರೆ.
ದ.ಆಫ್ರಿಕಾ vs ಭಾರತ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ವಿರಾಟ್ ಕೊಹ್ಲಿ ಶತಕ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕದ ಇನ್ನಿಂಗ್ಸ್ ಬಲದಿಂದ ಟೀಮ್ ಇಂಡಿಯಾ 327 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 27.1 ಓವರ್ಗೆ 83 ರನ್ ಗಳಿಸಿ ಆಲ್ಔಟ್ ಆಯಿತು. ಇದರಿಂದಾಗಿ ಭಾರತ 243 ರನ್ಗಳಿಂದ ಬೃಹತ್ ಜಯ ದಾಖಲಿಸಿತು. ಭಾರತ ಪರ ರವೀಂದ್ರ ಜಡೇಜ 5 ವಿಕೆಟ್ ಮತ್ತು ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಪವರ್ ಪ್ಲೇನಲ್ಲಿ ಮೊದಲ ವಿಕೆಟ್ ಕಬಳಿಸುವಲ್ಲಿ ಸಿರಾಜ್ ಯಶಸ್ವಿಯಾದರು.
ಕೊಹ್ಲಿಗೆ ಶುಭ ಕೋರಿದ ಸಚಿನ್: ತನ್ನ ದಾಖಲೆಯನ್ನು ವಿರಾಟ್ ಸರಿಗಟ್ಟಿದ ಕೆಲವೇ ನಿಮಿಷದಲ್ಲೇ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತೆಂಡೂಲ್ಕರ್ ಶುಭಾಶಯ ತಿಳಿಸಿದ್ದಾರೆ. "ಚೆನ್ನಾಗಿ ಆಡಿದ್ದೀರಿ. 49 ರಿಂದ 50ಕ್ಕೆ ಹೋಗಲು ನನಗೆ 365 ದಿನಗಳು ಬೇಕಾಯಿತು. ನೀವು 49 ರಿಂದ 50ಕ್ಕೆ ಇಷ್ಟು ಬೇಗ ಹೋಗಿ ಮತ್ತು ಮುಂದಿನ ದಿನಗಳಲ್ಲಿ ನನ್ನ ದಾಖಲೆ ಮುರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ. ಅಭಿನಂದನೆಗಳು ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ದಾಖಲೆ ಸರಿಗಟ್ಟಿದ ವಿರಾಟ್ಗೆ ಸಚಿನ್ ಸಂದೇಶ.. ರೆಕಾರ್ಡ್ ಮುರಿಯಲು ಗುರಿ ನೀಡಿದ ತೆಂಡೂಲ್ಕರ್