ಮುಂಬೈ :ನಾಯಕತ್ವ ಮುಕ್ತ ವಿರಾಟ್ ಕೊಹ್ಲಿ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಬ್ಯಾಟಿಂಗ್ ತೋರ್ಪಡಿಸಿಲ್ಲ. ಅವರು ಆರ್ಸಿಬಿಗಾಗಿ ಮೌಲ್ಯಯುತ ರನ್ಗಳಿಸುತ್ತಿದ್ದಾರೆ. ಆದರೆ, ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಪವರ್ಫುಲ್ ಶಾಟ್ ಹೊಡೆಯುವ ಸಾಮರ್ಥ್ಯವನ್ನು ಇತ್ತೀಚಿನ ದಿನಗಳಲ್ಲಿ ಕಳೆದುಕೊಂಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಕ್ರಿಕೆಟ್ನ ಮೂರು ಮಾದರಿಯಲ್ಲಿ ಸಹಸ್ರಾರು ರನ್ಗಳಿಸಿ ರನ್ಮಷಿನ್ ಎಂದು ಖ್ಯಾತಿ ಪಡೆದಿದ್ದ ಬ್ಯಾಟರ್. ಪ್ರಸ್ತುತ ನಾಯಕತ್ವ ಮುಕ್ತರಾಗಿದ್ದು, ಸಂಪೂರ್ಣ ಬ್ಯಾಟರ್ ಆಗಿ ಕಣಕ್ಕಿಳಿದಿದ್ದಾರೆ. ನಾಯಕತ್ವವನ್ನು ತ್ಯಜಿಸಿರುವ ಅವರಿಂದ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಹಾಗೂ ವಿಶ್ಲೇಷಕರು ಮತ್ತೆ ಕೊಹ್ಲಿಯ ವೈಭವಯುತ ಬ್ಯಾಟಿಂಗ್ ಮೂಡಿ ಬರಲು ಇದು ಸರಿಯಾದ ಸಮಯ ಎಂದು ಉತ್ಸಾಹದಿಂದ ಕಾಯುತ್ತಿದ್ದಾರೆ. ಆದರೆ, ಸಂಜಯ್ ಮಂಜ್ರೇಕರ್ ಅವರು, ಕೊಹ್ಲಿಯ ಬಳಿ ಪವರ್ ಗೇಮ್ ಆಡುವ ಸಾಮರ್ಥ್ಯ ಹಿಂದಿನಂತಿಲ್ಲ ಎಂದಿದ್ದಾರೆ.
2019ರಿಂದ ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸಿಲ್ಲ. ಆದರೆ, 15ನೇ ಆವೃತ್ತಿಯಲ್ಲಿ ಒಂದೆರಡು ಪಂದ್ಯಗಳಲ್ಲಿ ತಂಡದ ಜಯಕ್ಕೆ ನೆರವಾಗುವಂತಹ ಸ್ಕೋರ್ ಗಳಿಸಿದ್ದಾರೆ. ಮಾಜಿ ಕ್ರಿಕೆಟಿಗನ ಪ್ರಕಾರ, ಕೊಹ್ಲಿ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರಾಗಿದ್ದವರು. ಆದರೆ, ಅದನ್ನ ಅವರು ಇತ್ತೀಚಿನ ದಿನಗಳಲ್ಲಿ ತೋರುತ್ತಿಲ್ಲ ಎಂದು ಭಾವಿಸಿದ್ದಾರೆ.
ಇಎಸ್ಪಿಎಸ್ ಕ್ರಿಕ್ಇನ್ಫೋದಲ್ಲಿ ಮಾತನಾಡಿದ ಅವರು, "ಇತ್ತೀಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಕೇವಲ ಬೌಂಡರಿ ಗೆರೆ ದಾಟಿಸುತ್ತಿದ್ದಾರೆ ಮತ್ತು ಒಂದಷ್ಟು ರನ್ಗಳಿಸುತ್ತಿದ್ದಾರೆ. ಆದರೆ, ನಾನು ನೋಡಿದ ಹಾಗೆ, ಅವರು ಸಿಡಿಸುವ ಸಿಕ್ಸರ್ಗಳು ಬೌಂಡರಿ ಗೆರೆ ದಾಟಿ ಎಷ್ಟು ದೂರ ಹೋಗುತ್ತಿವೆ? ವೀಕ್ಷಕರ ಸ್ಟ್ಯಾಂಡ್ ಬಳಿ ಅಥವಾ ಎರಡನೇ ಹಂತವನ್ನು ದಾಟಬಹುದೇ? ಎನ್ನವುದರ ಕಡೆಗೆ ಹೆಚ್ಚು ಗಮನ ಹರಿಸುತ್ತಿರುತ್ತೇನೆ. ಅವರು ಕೇವಲ ಬೌಂಡರಿ ಗೆರೆಯನ್ನು ಮಾತ್ರ ದಾಟಿಸುತ್ತಿದ್ದಾರೆ. ಹಾಗಾಗಿ, ವಿರಾಟ್ ಕೊಹ್ಲಿಯಲ್ಲಿ ಪವರ್ ಫುಲ್ ಶಾಟ್ ಹೊಡೆಯುವ ಸಾಮರ್ಥ್ಯ ಸ್ವಲ್ಪ ಕಡಿಮೆಯಾಗಿದೆ. ನಾನು ಇದನ್ನೇ ಕಳೆದ ವರ್ಷದಿಂದ ಆಗಾಗ್ಗೆ ಹೇಳುತ್ತಿದ್ದೇನೆ" ಎಂದು ಮಂಜ್ರೇಕರ್ ತಿಳಿಸಿದ್ದಾರೆ.
5 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ದೊಡ್ಡ ಸಿಕ್ಸರ್ಗಳನ್ನು ಬಾರಿಸುತ್ತಿದ್ದರು. ನಾನು ಅದರ ಕಡೆಗೆ ಎದುರು ನೋಡುತ್ತಿದ್ದೇನೆ ಹೊರತು, 50 ಅಥವಾ 60 ರನ್ಗಳಿಸುವುದರ ಕಡೆಗಲ್ಲ. ಯಾವಾಗ ಅವರು ಹಿಂದಿನಂತೆ ಸಿಕ್ಸರ್ಗಳನ್ನು ಸಿಡಿಸಲು ಆರಂಭಿಸುತ್ತಾರೋ ಅಂದು ಅವರು ಟಿ20 ಕ್ರಿಕೆಟ್ಗೆ ಮರಳಿದಂತೆ ಎಂದು ಮಂಜ್ರೇಕರ್ ಹೇಳಿದ್ದಾರೆ. ವಿರಾಟ್ 2022ರಲ್ಲಿ 4 ಪಂದ್ಯಗಳಿಂದ 106 ರನ್ಗಳಿಸಿದ್ದಾರೆ. ಆರ್ಸಿಬಿ ಬ್ಯಾಟಿಂಗ್ ಬಳಗವನ್ನು ಮುನ್ನಡೆಸುವ ಅವರು ಇಂದು ಸಿಎಸ್ಕೆ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಇದನ್ನೂ ಓದಿ:ಪೃಥ್ವಿ ಶಾ ನೋಡಿದ್ರೇ ನನ್ನ ವೃತ್ತಿ ಜೀವನವೇ ನನ್ಗೆ ನೆನ್ಪಾಗುತ್ತೆ.. ಆತ ಭಾರತಕ್ಕಾಗಿ 100 ಟೆಸ್ಟ್ ಪಂದ್ಯ ಆಡಬಲ್ಲ: ಪಾಂಟಿಂಗ್ ಭವಿಷ್ಯ